ಕುಶಾಲನಗರ, ಜು. ೮: ಸರಕಾರಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ನ್ಯೂನತೆಗಳ ಬಗ್ಗೆ ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುವ ವರದಿಗಳನ್ನು ಆಧರಿಸಿ ಸಂಬAಧಿಸಿದ ಇಲಾಖೆಯ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪ್ರಾಧಿಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಲೋಕಾಯುಕ್ತ ಪ್ರಾಧಿಕಾರದ ಡಿವೈಎಸ್‌ಪಿ ದಿನಕರ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಕುಶಾಲನಗರದ ಪುರಸಭೆ ಸಭಾಂಗಣದಲ್ಲಿ ನಡೆದ ಲೋಕಾಯುಕ್ತ ಕುಂದುಕೊರತೆ ಅಹವಾಲು ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಜನರಿಂದ ದೂರುಗಳನ್ನು ಸ್ವೀಕರಿಸಿ ನಂತರ ಮಾತನಾಡಿದ ಅವರು, ಅಧಿಕಾರಿಗಳು ಸಿಬ್ಬಂದಿ ಜನರಿಗೆ ತೊಂದರೆ ಆಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಆತ್ಮ ಸಾಕ್ಷಿಗೆ ಅನುಗುಣವಾಗಿ ಕೆಲಸವಾಗಲಿ ಎಂದ ದಿನಕರ ಶೆಟ್ಟಿ, ರೈತಾಪಿ ವರ್ಗ, ವಯೋವೃದ್ಧರ ಸಮಸ್ಯೆಗಳನ್ನು ತಕ್ಷಣ ಪರಿಶೀಲಿಸಿ ಬಗೆಹರಿಸಬೇಕು. ಮಾಹಿತಿಗಳನ್ನು ನೀಡುವಲ್ಲಿ ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡಿಸುವುದು ಅಥವಾ ವಿಳಂಬ ಮಾಡಬಾರದು. ಸರಕಾರಿ ಕಚೇರಿಗಳು ಸಮರ್ಪಕವಾಗಿ ನಿರ್ವಹಣೆ ಆಗುವಂತೆ ಅಧಿಕಾರಿಗಳು ಗಮನಿಸಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಕಚೇರಿಗಳ ವ್ಯಾಪ್ತಿಯ ಸಣ್ಣ ವಿಷಯಗಳ ಬಗ್ಗೆ ದೂರುಗಳ ಪಟ್ಟಿ ಹೆಚ್ಚಾಗಿದ್ದು ಅಧಿಕಾರಿಗಳು ಗಮನಹರಿಸುವಂತೆ ಸೂಚಿಸಿದರು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ೧೨ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಒಳಚರಂಡಿ ಕಾಮಗಾರಿ ಬಗ್ಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ದೂರು ನೀಡಿದ ಹಿನ್ನೆಲೆಯಲ್ಲಿ ಒಳಚರಂಡಿ ಮಂಡಳಿ ಅಧಿಕಾರಿ ಪ್ರಸನ್ನ ಕುಮಾರ್, ಪುರಸಭೆ ಮುಖ್ಯ ಅಧಿಕಾರಿ ಟಿ.ಎಸ್. ಗಿರೀಶ್ ಮತ್ತಿತರ ಅಧಿಕಾರಿಗಳ ಬಳಿ ಮಾಹಿತಿ ಕಲೆ ಹಾಕಿದರು. ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸೂಚಿಸಿದರು. ಕಾಮಗಾರಿ ಸಮರ್ಪಕವಾಗಿ ನಡೆಯದಿದ್ದಲ್ಲಿ ತಾಂತ್ರಿಕ ತಂಡಗಳ ಮೂಲಕ ಪರಿಶೀಲನೆ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಸ್ವಚ್ಛ ಪಟ್ಟಣ ಸ್ವಚ್ಛ ಕಾವೇರಿ ಗುರಿ ಇಟ್ಟುಕೊಂಡು ಆಗುತ್ತಿರುವ ಯೋಜನೆಯನ್ನು ಕೂಡಲೇ ಪೂರ್ಣಗೊಳಿಸಬೇಕು. ಕಾವೇರಿ ನದಿಗೆ ಯಾವುದೇ ಭಾಗದಿಂದಲೂ ಕೊಳಚೆ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ನದಿ ಸಂರಕ್ಷಣೆಯ ಬಗ್ಗೆ ಅಗತ್ಯ ಕಾಳಜಿ ಹೊಂದಬೇಕಾಗಿದೆ ಎಂದರು.

ತಾವರೆಕೆರೆ ದುಸ್ಥಿತಿಯ ಬಗ್ಗೆ ಪತ್ರಿಕಾ ವರದಿ ಆಧರಿಸಿ ಈಗಾಗಲೇ ಲೋಕಾಯುಕ್ತದ ಮೂಲಕ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಒಂದು ತಿಂಗಳೊಳಗೆ ಕೆರೆ ಅಭಿವೃದ್ಧಿಯ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ಕೆರೆ ಜಾಗದ ಸಂರಕ್ಷಣೆಗಾಗಿ ಕೂಡಲೇ ಹದ್ದುಬಸ್ತು ಸರ್ವೇ ನಡೆಸಿ ಆವರಣ ಬೇಲಿ ನಿರ್ಮಿಸುವಂತೆ ಸೂಚಿಸಿದರು. ಕುಶಾಲನಗರ ಪುರಸಭೆ ಕಾರ್ಯಾಲಯಕ್ಕೆ ಸಂಬAಧಿಸಿದAತೆ ಸ್ಥಳೀಯ ನಾಗರಿಕರಿಂದ ದೂರುಗಳ ಮಹಾಪೂರವೇ ಹರಿದು ಬಂದವು. ಕೆರೆ ಒತ್ತುವರಿ, ಪುರಸಭೆಯಲ್ಲಿ ನಡೆದ ಮಹಿಳಾ ಸಿಬ್ಬಂದಿ ಮೇಲಿನ ದಬ್ಬಾಳಿಕೆ, ವಸತಿ ನಿಲಯಗಳ ಶುಚಿತ್ವ ಬಗ್ಗೆ, ಮೊರಾರ್ಜಿ ವಸತಿ ಶಾಲೆಯ ಅವ್ಯವಸ್ಥೆ, ವಿದ್ಯಾರ್ಥಿಗಳಿಂದ ಬಂದ ದೂರಿನ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಕೈಗೊಂಡ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು.

ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಾಗರಿಕರ ಸಮಸ್ಯೆಗಳು, ಮುಳ್ಳುಸೋಗೆ ಗ್ರಾಮದಲ್ಲಿ ಪಾರ್ಕ್ಗೆ ಮೀಸಲಿರಿಸಿದ ಜಾಗದ ಅಕ್ರಮ ಮಾರಾಟ ಬಗ್ಗೆ, ಬಡಾವಣೆಗಳ ಸಮಸ್ಯೆಗಳು, ವಾಣಿಜ್ಯ ಮಳಿಗೆಗಳಲ್ಲಿ ಕನ್ನಡ ಫಲಕಗಳ ಅಳವಡಿಕೆ, ಪುರಸಭೆ ವಾಣಿಜ್ಯ ಸಂಕೀರ್ಣದ ಟೆಂಡರ್ ಪ್ರಕ್ರಿಯೆ ಬಗ್ಗೆ, ಕುಶಾಲನಗರ ಪಟ್ಟಣದ ವೆಂಕಟೇಶ್ವರ ಥಿಯೇಟರ್ ಜಾಗದ ಒತ್ತುವರಿ ತೆರವು, ಪುರಸಭೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ನೀಡದೆ ಹೊರ ಜಿಲ್ಲೆಯ ವ್ಯಕ್ತಿಗಳಿಗೆ ಉದ್ಯೋಗ ನೀಡಿರುವ ಬಗ್ಗೆ ಸೇರಿದಂತೆ ಹಲವು ಆಹವಾಲುಗಳು ಸಲ್ಲಿಕೆಯಾದವು. ಸಂಬAಧಿಸಿದ ಸಮಸ್ಯೆಗಳಿಗೆ ಸಭೆಯಲ್ಲಿ ಉಪಸ್ಥಿತರಿದ್ದ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸಮಜಾಯಿಷಿಕೆ ಪಡೆದ ಡಿವೈಎಸ್‌ಪಿ ದಿನಕರ ಶೆಟ್ಟಿ, ಎಲ್ಲಾ ಸಮಸ್ಯೆಗಳಿಗೂ ಶೀಘ್ರದಲ್ಲಿ ಪರಿಹಾರ ಕಂಡುಹಿಡಿಯಬೇಕು. ಸಮಸ್ಯೆಗಳ ಪರಿಹಾರದ ಬಗ್ಗೆ ಅಧಿಕಾರಿಗಳು ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಕುಶಾಲನಗರ ಪುರಸಭೆ ಮತ್ತು ಕಂದಾಯ ಇಲಾಖೆಯ ವ್ಯಾಪ್ತಿಯ ಸಮಸ್ಯೆಗಳು ಕೇಳಿ ಬಂದವು. ಲೋಕಾಯುಕ್ತ ಇನ್ಸ್ಪೆಕ್ಟರ್ ವೀಣಾ ನಾಯಕ್ ಮತ್ತು ಸಿಬ್ಬಂದಿ, ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಗಿರೀಶ್, ಪೊಲೀಸ್ ವೃತ್ತ ನಿರೀಕ್ಷಕ ಪ್ರದೀಪ್ ಕುಮಾರ್ ಮತ್ತು ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು, ದೂರುದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.