ವಯನಾಡು, ಜು. ೭: ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿ ಎಂಬಲ್ಲಿ ಮಂಗಳವಾರ ಭಯಾನಕ ರೀತಿಯಲ್ಲಿ ಭೂ ಕುಸಿತ ಸಂಭವಿಸಿದೆ. ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಸಂಭವಿಸಿದ ಭೂ ಕುಸಿತದಲ್ಲಿ ಮೂರು ಮಂದಿ ಮೃತಪಟ್ಟಿದ್ದು, ೧೦ ಮಂದಿ ಗಾಯಗೊಂಡಿದ್ದಾರೆ. ಐವರು ನಾಪತ್ತೆಯಾಗಿದ್ದಾರೆ. ಮಿನಾಕ್ಷಿ ಸೇತುವೆ ಬಳಿ ನಿರ್ಮಾಣ ಹಂತದ ವಯನಾಡು-ಮಲ್ಲಪುರಂ ಸುರಂಗ ರಸ್ತೆ ಯೋಜನೆ ನಡೆಯುತ್ತಿರುವ ಸ್ಥಳದಲ್ಲಿ ಸುನಾಮಿಯಂತೆ ಮಣ್ಣು ಮಿಶ್ರಿತ ಕೆಸರು ನುಗ್ಗಿಬಂದಿದ್ದು, ಇದರ ರಭಸಕ್ಕೆ ಅಲ್ಲಿದ್ದ ಟ್ಯಾಂಕರ್‌ವೊAದು ಕೊಚ್ಚಿ ಬಂದಿದೆ. ಇದರಿಂದ ಭೀತಿಗೊಂಡ ಜನರು ತಮ್ಮ ಪ್ರಾಣ ಉಳಿಸಿಕೊಳ್ಳಲು ದಿಕ್ಕಾ ಪಾಲಾಗಿ ಓಡಿದ್ದಾರೆ.

ಭೂ ಕುಸಿತದಿಂದ ಖಾಸಗಿ ಬಸ್‌ವೊಂದು ಮೀನಾಕ್ಷಿ ನದಿಗೆ ಬಿದ್ದಿದ್ದೆ. ನೀರಿನಲ್ಲಿ ಬಸ್‌ನಲ್ಲಿ ಯಾರೂ ಇಲ್ಲದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದವು. ಈ ಹಿಂದೆ ೨೦೨೪ರಲ್ಲಿ ವಯನಾಡಿನಲ್ಲಿ ಸಂಭವಿಸಿದ್ದ ಭೀಕರ ಭೂ ಕುಸಿತದಲ್ಲಿ ೨೫೦ಕ್ಕೂ ಮಂದಿ ಹೆಚ್ಚು ಸಾವನ್ನಪ್ಪಿದ್ದರು.

ಈಗ ಅದೇ ರೀತಿಯಲ್ಲಿ ಮತ್ತೊಂದು ಭಯಾನಕ ಭೂಕುಸಿತ ಸಂಭವಿಸಿದ್ದು, ವಯನಾಡಿನಲ್ಲಿ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.