*ಗೋಣಿಕೊಪ್ಪ, ಜು. ೭: ರೂ. ಒಂದು ಕೋಟಿ ಅನುದಾನದಲ್ಲಿ ನಿರ್ಮಾಣವಾದ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ವಿಪ್ರ ಸಭಾ ಭವನ ಲೋಕಾರ್ಪಣೆಗೆ ಸಿದ್ಧವಾಗಿದೆ ಎಂದು ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ ಮಾಹಿತಿ ನೀಡಿದರು.

ಕೈಕೇರಿ ಗ್ರಾಮದಲ್ಲಿ ನಿರ್ಮಾಣವಾಗಿರುವ ನೂತನ ಸಭಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. ೯ ರಂದು ಬೆಳಿಗ್ಗೆ ೧೦.೩೦ಕ್ಕೆ ಸಂಸದ ಯದವೀರ್ ಒಡೆಯರ್ ನೂತನ ಸಭಾಭವನ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ತಿಳಿಸಿದರು.

ಜತೆಗೆ ವಿಪ್ರ ಯುವ ಸಂಘದ ಅನ್ನಪೂರ್ಣ ಭೋಜನ ಶಾಲೆಯನ್ನು ವೀರಾಜಪೇಟೆ ಶಾಸಕ ಎ. ಎಸ್ ಪೊನ್ನಣ್ಣ ಉದ್ಘಾಟಿಸಲಿದ್ದಾರೆ ಬಾಳೆ ಕುದ್ರು ಶ್ರೀಮಠದ ಶ್ರೀ ವಾಸದೇವ ಸದಾಶಿವಾಶ್ರಮದ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ.

ಸಂಘದ ಅಧ್ಯಕ್ಷ ರಾಘವೇಂದ್ರ ವೈಲಾಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ವಿಪ್ರ ಯುವ ಸಂಘದ ಸ್ಥಾಪಕ ಕಾರ್ಯದರ್ಶಿ ರಾಜೇಶ್ ನೂರಿತ್ತಾಯ ಉಪಸ್ಥಿತರಿರುತ್ತಾರೆ. ನಂತರ ಮಧ್ಯಾಹ್ನ ೨ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದರು.

ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನಸಭಾಧ್ಯಕ್ಷ ಕೆ. ಜಿ. ಬೋಪಯ್ಯ, ಮಾಜಿ ಎಂ.ಎಲ್.ಸಿ ಸುನಿಲ್ ಸುಬ್ರಮಣಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಭಾಗವಾಗಿ ತಾ. ೮ ರಂದು ಸಂಜೆ ೬ ಗಂಟೆಗೆ ವಾಸ್ತು ಹೋಮ, ರಾಕ್ಷೆÆÃಘ್ನ ಹೋಮ, ಮಹಾ ಸುದರ್ಶನ ಹೋಮ, ದುರ್ಗಾ ನಮಸ್ಕಾರ ಪೂಜೆ ನೆರವೇರಲಿದೆ. ತಾ. ೯ ರಂದು ಬೆಳಿಗ್ಗೆ ೬.೩೦ ಗಂಟೆಗೆ ಮಹಾ ಗಣಪತಿ ಹೋಮ, ೮ ಕ್ಕೆ ಸತ್ಯನಾರಾಯಣ ಪೂಜೆ, ಪ್ರಸಾದ ವಿತರಣೆ, ಮ. ೨ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ, ೩.೩೦ ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

೧೯೮೩ರಲ್ಲಿ ರಮಣಶರ್ಮ ಅಧ್ಯಕ್ಷತೆಯಲ್ಲಿ ಸಂಘ ಸ್ಥಾಪನೆ ಮಾಡಲಾಗಿದೆ. ಸಂಸದ ಯದುವೀರ್ ಒಡೆಯರ್ ೨೦ ಲಕ್ಷ ಅನುದಾನ ಒದಗಿಸಿಕೊಟ್ಟಿದ್ದು ಮತ್ತಷ್ಟು ಅನುದಾನವನ್ನು ನೀಡುವ ಭರವಸೆಯನ್ನು ನೀಡಿದ್ದಾರೆ.

ವಿಪ್ರ ಸಮುದಾಯದವರ ಧನ ಸಹಕಾರದಿಂದ ಸಭಾ ಭವನ ನಿರ್ಮಿಸಲಾಗಿದೆ. ಶಾಸಕ ಎ.ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಅವರುಗಳು ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ.

ಜೊತೆಗೆ ವಿಪ್ರ ಸಮಾಜದವರು ಮತ್ತಷ್ಟು ಸಹಕಾರ ನೀಡಿದಲ್ಲಿ ಸಂಘದ ನೂತನ ಕಟ್ಟಡದಲ್ಲಿ ವಿಶ್ರಾಂತಿ ಗೃಹ, ವಿಸ್ತಾರವಾದ ಅಡುಗೆ ಕೋಣೆ, ಕಚೇರಿಗಳನ್ನು ನಿರ್ಮಿಸುವ ಚಿಂತನೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಗೌ. ಅಧ್ಯಕ್ಷ ಶ್ರೀಪತಿ ಪಡಂತ್ತಾಯ, ಪ್ರಧಾನ ಕಾರ್ಯದರ್ಶಿ ಸುದರ್ಶನ್ ಕೆದಿಲಾಯ, ಉಪಾಧ್ಯಕ್ಷ ಮೋಹನ್ ನಲ್ಲೂರಾಯ, ಕೋಶಾಧಿಕಾರಿ ಪವನ್ ಕಂಡಿಪಾಡಿತ್ತಾಯ ಉಪಸ್ಥಿತರಿದ್ದರು.