ಮಡಿಕೇರಿ, ಜು. ೬: ಕೊಡಗು ಜಿಲ್ಲೆಯಲ್ಲಿ ಮಿತಿಮೀರಿರುವ ವನ್ಯಜೀವಿ ಉಪಟಳ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಹಾಗೂ ಸಿ ಮತ್ತು ಡಿ ಲ್ಯಾಂಡ್ ನೆಪದಲ್ಲಿ ಸಾರ್ವಜನಿಕರ ಭೂಮಿಯನ್ನು ಕಸಿಯುವ ಯತ್ನವನ್ನು ಸರಕಾರ ಮಾಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ನಗರದಲ್ಲಿ ಬೃಹತ್ ಜನಾಕ್ರೋಶ ವಾಹನ ಜಾಥಾ ಹಾಗೂ ಪ್ರತಿಭಟನಾ ಸಭೆ ನಡೆಸಿತು.

ಕೊಡ್ಲಿಪೇಟೆ- ಸೋಮವಾರಪೇಟೆ-ಮಾದಾಪುರ, ತೊರೆನೂರು-ಹೆಬ್ಬಾಲೆ-ಕುಶಾಲನಗರ, ಸಿದ್ದಾಪುರ-ನೆಲ್ಲಿಹುದಿಕೇರಿ, ಕುಟ್ಟ-ಗೋಣಿಕೊಪ್ಪ-ವೀರಾಜಪೇಟೆ, ಭಾಗಮಂಡಲ-ನಾಪೋಕ್ಲು ಸೇರಿದಂತೆ ಜಿಲ್ಲೆಯ ವಿವಿಧ ಮಾರ್ಗವಾಗಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಬಿಜೆಪಿ ಕಾರ್ಯಕರ್ತರು ವಾಹನ ಜಾಥಾದ ಮೂಲಕ ಆಗಮಿಸಿ ಗಾಂಧಿ ಮೈದಾನದಲ್ಲಿ ಜಮಾಯಿಸಿದರು. ಬಳಿಕ ಅಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಯಿತು.

ಜಡಿಮಳೆಯ ನಡುವೆಯೂ ಜಿಲ್ಲೆಯ ವಿವಿಧೆಡೆಗಳಿಂದ ಕಾರ್ಯಕರ್ತರು ಆಗಮಿಸಿ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಬೇಕು. ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡುವ ಬದಲು ಪ್ರಸ್ತಾಪವನ್ನು ಕಳುಹಿಸಿದರೆ ಅನುಮೋದನೆಗೆ ಬಿಜೆಪಿ ಸಹಕರಿಸಲಿದೆ ಎಂದು ಪ್ರಮುಖರು ಹೇಳಿದರು.

ಕೇಂದ್ರದೊAದಿಗೆ ಕೈಜೋಡಿಸಿ : ಯದುವೀರ್

ಕೇಂದ್ರ ಸರಕಾರ ರೂ. ೩೫೦ ಕೋಟಿ ಅನುದಾನವನ್ನು ವನ್ಯಜೀವಿ ಉಪಟಳ ನಿಯಂತ್ರಣಕ್ಕೆ ನೀಡುತ್ತಿದ್ದು, ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರದೊAದಿಗೆ ಕೈಜೋಡಿಸಬೇಕೆಂದು ಸಂಸದ ಯದುವೀರ್ ಒಡೆಯರ್ ಆಗ್ರಹಿಸಿದರು.

ವನ್ಯಜೀವಿ-ಮಾನವ ಸಂಘರ್ಷದ ಸಮಸ್ಯೆ ಪರಿಹರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನಪ್ರತಿನಿಧಿಗಳು ಈ ಬಗ್ಗೆ ಸ್ಪಷ್ಟ ಪ್ರತಿಕ್ರಿಯೆ ನೀಡಬೇಕು. ಮದೆನಾಡುವಿನಲ್ಲಿ ವಿದ್ಯಾರ್ಥಿನಿ ಹಾಗೂ ತಿತಿಮತಿಯಲ್ಲಿ ಐಪಿಎಸ್ ಅಧಿಕಾರಿಯ ಪತ್ನಿ ಸೇರಿದಂತೆ ವಿವಿಧ ವರ್ಗದ ಜನರು ವನ್ಯಜೀವಿಗಳ ದಾಳಿಗೆ ಬಲಿಯಾಗಿದ್ದಾರೆ. ಇಂತಹ ದುರ್ಘಟನೆಗಳು ನಡೆಯುತ್ತಿದ್ದರೂ ಸರ್ಕಾರದಿಂದ ಪರಿಣಾಮಕಾರಿ ಕ್ರಮಗಳು ಕಾಣುತ್ತಿಲ್ಲ ಎಂದು ಟೀಕಿಸಿದರು.

ಕರ್ನಾಟಕಕ್ಕೆ ಕೇಂದ್ರ ಸರ್ಕಾರದಿಂದ ಯಾವುದೇ ಹಣ ಬಂದಿಲ್ಲ ಎಂಬುದು ಸುಳ್ಳು ಎಂದು ಹೇಳಿದ ಅವರು, ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಸಲ್ಲಿಸಿ ಕೊಡಗಿನ ಸಮಸ್ಯೆಯ ಗಂಭೀರತೆಯನ್ನು ಗಮನಕ್ಕೆ ತರಲಾಗಿದೆ. ಪರಿಣಾಮ ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾದೇಶಿಕ ಕಾರ್ಯಯೋಜನೆ (ಖegioಟಿಚಿಟ ಂಛಿಣioಟಿ Pಟಚಿಟಿ) ರೂಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆನೆಗಳ ಚಲನವಲನವನ್ನು ನಿಗಾ ವಹಿಸಿ ಮುನ್ನೆಚ್ಚರಿಕೆ ನೀಡುವ ತಂತ್ರಜ್ಞಾನವನ್ನು ಅಳವಡಿಸುವ ಯೋಜನೆಯೂ ಇದೆ. ಅಲ್ಲದೆ, ಪ್ರಾಜೆಕ್ಟ್ ಎಲಿಫೆಂಟ್ ಯೋಜನೆಯಡಿ ಹಂತ ಹಂತವಾಗಿ ರೂ. ೩೫೦ ಕೋಟಿ ಅನುದಾನ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅರಣ್ಯ ಸಚಿವರ ನೇಮಕವೇ ಆಗಿಲ್ಲ. ಅರಣ್ಯ ಇಲಾಖೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ. ವಯನಾಡಿಗೆ ಹೆಚ್ಚಿನ ಆದ್ಯತೆ ನೀಡಿ ಕೆಲಸ ಮಾಡುತ್ತಿರುವ ರಾಜ್ಯ ಸರ್ಕಾರ, ಕೊಡಗಿನ ಸಮಸ್ಯೆಗಳ ಬಗ್ಗೆ ಯಾವುದೇ ಸ್ಪಂದನ ತೋರುತ್ತಿಲ್ಲ. ಜಿಲ್ಲೆಯ ಜನರ ಹಿತರಕ್ಷಣೆ ಕಾಯುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ದೂರಿದರು.

ಕೇಂದ್ರ ಸರ್ಕಾರಕ್ಕೆ ಮನವಿಗಳು ಮತ್ತು ಅಗತ್ಯ ದಾಖಲೆಗಳನ್ನು ಸಲ್ಲಿಸಿ, ರಾಜ್ಯ ಸರ್ಕಾರದೊಂದಿಗೆ ಸಮನ್ವಯ ಸಾಧಿಸಿ ಕೆಲಸ ಮಾಡಲು ನಾವು ಸದಾ ಸಿದ್ಧರಿದ್ದೇವೆ. ಆದರೆ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ಸಿಗುತ್ತಿಲ್ಲ. ಬದಲಾಗಿ ಪ್ರತಿಯೊಂದು ವಿಷಯಕ್ಕೂ ಕೇಂದ್ರ ಸರ್ಕಾರವನ್ನೇ ಹೊಣೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.

ರಾಜ್ಯ ಸರ್ಕಾರ ಕೈಜೋಡಿಸಿ ವನ್ಯಜೀವಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊAಡು ಜನರ ರಕ್ಷಣೆಗೆ ಮುಂದಾಗಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಯಶಸ್ವಿಯಾಗುತ್ತೇವೆ. ಇದು ಕೇವಲ ಬಿಜೆಪಿ ಹಮ್ಮಿಕೊಂಡಿರುವ ಯಾತ್ರೆಯಲ್ಲ, ಕೊಡಗಿನ ಜನರ ಆಕ್ರೋಶದ ಪ್ರತೀಕವಾಗಿದೆ ಎಂದು ಯದುವೀರ್ ಒಡೆಯರ್ ಹೇಳಿದರು.

ಸಿ ಮತ್ತು ಡಿ ಲ್ಯಾಂಡ್ ವಿಚಾರದಲ್ಲಿ ಕೇಂದ್ರಕ್ಕೆ ಯಾವುದೇ ಸಂಬAಧವಿಲ್ಲ. ರಾಜ್ಯ ಸರಕಾರವೇ ಇದಕ್ಕೆ ಪರಿಹಾರ ನೀಡಬೇಕೆಂದರು.

ಘೋಷಣೆಯಾದ ಅನುದಾನ ಎಲ್ಲಿ : ಬೋಪಯ್ಯ

ಕಾಂಗ್ರೆಸ್ ಸರಕಾರ ಮಂಡಿಸಿದ ಬಜೆಟ್‌ಗಳಲ್ಲಿ ಕಾಡಾನೆ ಉಪಟಳ ತಡೆಗೆ ಅನುದಾನ ನೀಡಿದ್ದು, ಈ ಹಣದಲ್ಲಿ ಎಲ್ಲೆಲ್ಲಿ ಬ್ಯಾರಿಕೇಡ್ ನಿರ್ಮಾಣವಾಗಿದೆ ಸೇರಿದಂತೆ ಪರಿಹಾರ ಕ್ರಮಗಳ ಪ್ರಗತಿಯನ್ನು ಸರಕಾರ ಬಹಿರಂಗಪಡಿಸಬೇಕು ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಆಗ್ರಹಿಸಿದರು. ೪ಐದನೇ ಪುಟಕ್ಕೆ

್ಕ

(ಮೊದಲ ಪುಟದಿಂದ) ನಿಯಂತ್ರಣಕ್ಕೆ ಕಾರ್ಯಕ್ರಮ ಕೈಗೊಳ್ಳದಿದ್ದರೆ ಕೊಡಗಿನ ಜನ ಕಾನೂನನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಈ ಹಿಂದೆ ಕೊಡಗಿನಲ್ಲಿದ್ದ ನರಿಮಂಗಲ ಪದ್ಧತಿ ಮತ್ತೇ ಆರಂಭವಾದರೂ ಅಚ್ಚರಿ ಇಲ್ಲ. ಅರಣ್ಯದ ಬಗ್ಗೆ ತಿಳಿದವರನ್ನು ಅರಣ್ಯ ಸಚಿವರನ್ನಾಗಿ ನೇಮಿಸಬೇಕೆಂದು ಒತ್ತಾಯಿಸಿದರು.

ಕೊಡಗು ಸಿಂಗಾಪುರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಿಂಬಿಸುವ ಕೆಲಸ ಮಾತ್ರ ಆಗುತ್ತಿದೆ. ಯಾವುದೇ ಸಮಸ್ಯೆ ಇಲ್ಲ ಎಂಬAತೆ ೩ ವರ್ಷ ಇಲ್ಲಿನ ಶಾಸಕರು ಕಾಲಕಳೆದಿದ್ದಾರೆ. ವನ್ಯಜೀವಿ ಉಪಟಳ ಇಂದು, ನಿನ್ನೆಯದ್ದಲ್ಲ. ಆದರೆ, ಈ ಮೂರು ವರ್ಷದ ಅವಧಿಯನ್ನು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಕಾಂಗ್ರೆಸ್ ಕಾಲಾವಧಿಯಲ್ಲಿ ಯಾವುದೇ ಪರಿಹಾರ ಕ್ರಮವೂ ಆಗಿಲ್ಲ. ನಮ್ಮ ಸರಕಾರವಿದ್ದ ಸಂದರ್ಭ ರೂ. ೧೬೫ ಕೋಟಿ ಹಣವನ್ನು ರೈಲ್ವೆ ಬ್ಯಾರಿಕೇಡ್‌ಗೆ ನೀಡಿದ್ದೆವು. ಆದರೆ, ಈಗಿನ ಸರಕಾರ ನಿರ್ಮಾಣಗೊಂಡ ಕಂದಕ, ಬ್ಯಾರಿಕೇಡ್, ಸೋಲಾರ್ ತಂತಿಯ ನಿರ್ವಹಣೆಯನ್ನೂ ಮಾಡಿಲ್ಲ. ಸರಕಾರದ ಬಜೆಟ್‌ಗೆ ಅನುಮೋದನೆಯೇ ಸಿಕ್ಕಿಲ್ಲ. ವನ್ಯಜೀವಿ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ತೆರಳಲು ಭಯಪಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಇದೀಗ ಕೇಂದ್ರದ ಕಡೆ ಬೊಟ್ಟು ಮಾಡುತ್ತಾರೆ. ಮೂರು ವರ್ಷದಲ್ಲಿ ವನ್ಯಜೀವಿ ಹಾವಳಿ ತಡೆಗೆ ಎಷ್ಟು ಪ್ರಸ್ತಾವನೆ ಕೇಂದ್ರಕ್ಕೆ ಕಳುಹಿಸಿದ್ದಾರೆ ಎಂಬುದರ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.

ವನ್ಯಜೀವಿ ಹಾವಳಿಗೆ ಪರಿಹಾರ ಸಿಗದೆ ಹತಾಶರಾದ ವನ್ಯಜೀವಿ ಮಂಡಳಿ ಸದಸ್ಯರು ಇದೀಗ ಮೌನವಹಿಸಿದ್ದಾರೆ. ಇದುವೆ ಸರಕಾರದ ವಿಫಲತೆಯನ್ನು ತೋರಿಸುತ್ತದೆ. ಪಾರಂಪರಿಕವಾಗಿ ಬಂದ ವನ್ಯಜೀವಿ ಉತ್ಪನ್ನಗಳನ್ನು ಹಿರಿಯರು ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಕಾಂಗ್ರೆಸ್ ಸರಕಾರ ಈ ವಿಷಯಕ್ಕೂ ಕೈ ಹಾಕಿದೆ. ಇಷ್ಟು ವರ್ಷ ಯಾವುದೇ ಸರಕಾರವೂ ಕೈಗೊಳ್ಳದ ಕ್ರಮವನ್ನು ಈ ಸರಕಾರ ಮಾಡುವುದು ಯಾಕೆ? ಎಂದು ಪ್ರಶ್ನಿಸಿದರು.

ಈ ಕಾಯಿದೆ ಕೇಂದ್ರ ಸರಕಾರದ್ದಾದರೂ ಅನುಷ್ಠಾನ ಮಾಡುವ ಅಧಿಕಾರ ರಾಜ್ಯ ಸರಕಾರದ್ದು. ಪ್ರಾಣಿಗಳ ಮೇಲೆ ಮಾತ್ರ ದಯೆ ಇದ್ದರೆ ಸಾಲದು. ಮಾನವನ ಮೇಲೂ ದಯೆ ತೋರಬೇಕೆಂದು ಬೋಪಯ್ಯ ಟೀಕಿಸಿದರು.

ಜನರನ್ನು ಒಕ್ಕಲೆಬ್ಬಿಸುವ ಯತ್ನ : ರಂಜನ್

ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಸಿ ಮತ್ತು ಡಿ ಲ್ಯಾಂಡ್ ಅರಣ್ಯಕ್ಕೆ ವರ್ಗಾವಣೆ ಮಾಡಲು ಸರಕಾರ ಮುಂದಾಗಿದೆ. ೧೯೭೨ರ ಅಧಿಸೂಚನೆಯನ್ನು ಇದೀಗ ಅನುಷ್ಠಾನಕ್ಕೆ ಮುಂದಾಗಿರುವುದು ಸರಿಯಲ್ಲ. ಪರಿಸರವಾದಿಗಳ ಕುಮ್ಮಕ್ಕಿನಿಂದ ಈ ರೀತಿ ಆಗುತ್ತಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಹೆಚ್ಚಾಗಿ ಇದರಿಂದ ಸಮಸ್ಯೆಗೆ ಒಳಗಾಗುತ್ತಾರೆ. ಸುಮಾರು ೫ ಸಾವಿರ ಕುಟುಂಬವನ್ನು ಬೀದಿಪಾಲು ಮಾಡಲು ಸರಕಾರ ಮುಂದಾಗಿದೆ ಎಂದು ಕಿಡಿಕಾರಿದರು.

ಹಲವು ತಲೆಮಾರಿನಿಂದ ಜೀವನ ನಡೆಸುತ್ತಿದ್ದವರ ಭೂಮಿಯನ್ನು ಕಸಿಯುವ ಯತ್ನ ಇದಾಗಿದೆ. ೨೦೧೯ರಲ್ಲಿ ಈ ಬಗ್ಗೆ ಪ್ರಸ್ತಾಪಿಸಿ ವಿವಿಧ ನಮೂನೆಗಳಲ್ಲಿ ಹಕ್ಕುಪತ್ರ ನೀಡುವ ಕೆಲಸವಾಗಿತ್ತು. ಮೂರವರೆ ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಆದರೆ, ಈ ಸರಕಾರ ಅದಕ್ಕೂ ತಡೆಯೊಡ್ಡುವ ಕೆಲಸ ಮಾಡುತ್ತಿದೆ. ಕಂದಾಯ ಗ್ರಾಮಗಳನ್ನು ರದ್ದು ಮಾಡುತ್ತಿದೆ. ನಮ್ಮ ಅಧಿಕಾರ ಅವಧಿಯಲ್ಲಿ ಕೊಡಗಿನ ರಸ್ತೆ ಸ್ಥಿತಿ ಹೇಗಿತ್ತು. ಈಗ ಹೇಗಿದೆ. ವನ್ಯಜೀವಿ ಹಾವಳಿಯೂ ನಿಯಂತ್ರಣದಲ್ಲಿತ್ತು. ಇಂದಿನ ಶಾಸಕರು ಏನೂ ಮಾಡುತ್ತಿದ್ದಾರೆ. ಕೊಡಗಿನ ಜನರ ಬದುಕಿಗೆ ಮಾರಕವಾಗಿರುವ ಆದೇಶವನ್ನು ನಮ್ಮ ಸರಕಾರ ಅಧಿಕಾರಕ್ಕೆ ಬಂದಲ್ಲಿ ಬಂದ ಮೂರು ತಿಂಗಳಿನಲ್ಲಿ ಹಿಂಪಡೆಯುತ್ತದೆ ಎಂದರು.

ಶಾಸಕರ ಮೂರು ವರ್ಷದ ಸಾಧನೆ ಏನು ಎಂದು ಪ್ರಶ್ನಿಸಿದ ರಂಜನ್, ಪೊಳ್ಳು ಘೋಷಣೆ ಬಿಡಿ. ಜನರ ಕಣ್ಣೀರೊರೆಸುವ ಕೆಲಸ ಮಾಡಿ ಎಂದು ಒತ್ತಾಯಿಸಿದರು.

ಬಿಡಿಗಾಸು ಬಿಡುಗಡೆಯಾಗಿಲ್ಲ : ಸುಜಾ

ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಮಾತನಾಡಿ, ವನ್ಯಜೀವಿ ಹಾವಳಿಯಿಂದ ಗ್ರಾಮೀಣ ಪ್ರದೇಶದಲ್ಲಿ ತೊಂದರೆಯಾಗುತ್ತಿದೆ. ೪ ಬಾರಿ ಈ ಕುರಿತು ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ. ಪ್ರತಿ ಬಾರಿಯೂ ಅರಣ್ಯ ಸಚಿವರಿಂದ ಒಂದೇ ರೀತಿ ಉತ್ತರ ದೊರೆಯುತ್ತಿತ್ತು. ಕಾಡಾನೆ ಸೇರಿದಂತೆ ವನ್ಯಜೀವಿ ಹಾವಳಿ ನಿಯಂತ್ರಿಸುವ ಸಂಬAಧ ಯಾವುದೇ ಕ್ರಿಯಾಯೋಜನೆಯನ್ನು ಅರಣ್ಯ ಇಲಾಖೆ ಮಾಡಿಲ್ಲ. ಇದುವರೆಗೂ ಬಿಡಿಗಾಸು ಬಿಡುಗಡೆಯಾಗಿಲ್ಲ ಎಂದರು.

ಸರಕಾರ ಸ್ಪಂದನ ನೀಡದಿದ್ದರೆ ಸಮಸ್ಯೆ ಇರುವ ಜಾಗವನ್ನು ಸಂಘಟಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಬಹಿರಂಗ ಚರ್ಚೆಗೆ ಬನ್ನಿ

ವನ್ಯಜೀವಿ ಹಾವಳಿ ಪರಿಹಾರದ ವಿಷಯದಲ್ಲಿ ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡುವ ಶಾಸಕರು ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿ ಕಾಳಪ್ಪ ಆಹ್ವಾನಿಸಿದರು.

ಈ ಹಿಂದಿನಿAದಲೂ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಪಕ್ಷದವರು, ಸಂಘ ಸಂಸ್ಥೆಗಳು, ರೈತರ ಸಭೆ ನಡೆಸುವ ಒತ್ತಾಯವನ್ನು ಮಾಡುತ್ತ ಬಂದಿದ್ದೇವೆ. ಇಲ್ಲಿನ ಜನಪ್ರತಿನಿಧಿಗಳು ಪ್ರತಿಷ್ಠೆಗಾಗಿ ಸಭೆ ನಡೆಸುತ್ತಿಲ್ಲ. ಬಿಜೆಪಿ ಶಾಸಕರಿದ್ದ ಸಂದರ್ಭ ಕಸ್ತೂರಿ ರಂಗನ್, ಜಮ್ಮಾ ವಿಷಯದಲ್ಲಿ ಪಕ್ಷಾತೀತ ಹೋರಾಟ ಮಾಡಿದ್ದೆವು. ಇಂದಿನ ಶಾಸಕರಿಗೆ ಪರಿಹಾರ ಬೇಕಿಲ್ಲ. ಪ್ರತಿಷ್ಠೆ ಮುಖ್ಯವಾಗಿದೆ. ಎಲ್ಲದಕ್ಕೂ ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡುತ್ತಿದ್ದಾರೆ. ಕೇವಲ ಪರಿಹಾರ ನೀಡಿದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಜಮ್ಮಾ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದನ್ನು ಸರಿಮಾಡಿ ತೋರಿಸಿ ಎಂದು ಸವಾಲೆಸೆದ ಅವರು, ಶಾಶ್ವತ ಪರಿಹಾರವಾಗುವ ತನಕ ಹೋರಾಟ ಮುಂದುವರೆಸಲಾಗುವುದು ಎಂದರು.

ವನ್ಯಜೀವಿ ಹಾವಳಿಯಿಂದ ಜನರು ದೊಡ್ಡ ಮಟ್ಟದ ಸಮಸ್ಯೆ ಎದುರಿಸುತ್ತಿದ್ದಾರೆ. ಪಶ್ಚಿಮಘಟ್ಟ ಸಾಲಿನಲ್ಲಿರುವ ಕೊಡಗಿನ ಜನರು ಅನಾದಿ ಕಾಲದಿಂದಲೂ ಇಲ್ಲಿನ ವನ್ಯಸಂಪತ್ತು, ಪರಿಸರವನ್ನು ರಕ್ಷಿಸುತ್ತ ಬಂದಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಕಾಡಾನೆ ಸೇರಿದಂತೆ ವಿವಿಧ ವನ್ಯಜೀವಿಗಳ ಉಪಟಳದಿಂದ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಸಾವು-ನೋವು ಸಂಭವಿಸುತ್ತಿದೆ. ಆನೆ ದಾಳಿಯಿಂದ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈಗಾಗಲೇ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ ಗಂಭೀರತೆಯನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದೇವೆ. ಆದರೂ ಸರಕಾರ ಮಾತ್ರ ಯಾವುದೇ ಸ್ಪಂದನ ನೀಡದೆ ಮೌನ ವಹಿಸಿದೆ ಎಂದು ರವಿ ಕಾಳಪ್ಪ ದೂರಿದರು.

ಸಿ ಮತ್ತು ಡಿ ಲ್ಯಾಂಡ್ ನೆಪದಲ್ಲಿ ಕೊಡಗಿನ ಜನರನ್ನು ಗ್ರಾಮಗಳಿಂದ ಒಕ್ಕಲೆಬ್ಬಿಸುವ ಕೆಲವಾಗುತ್ತಿದೆ. ನೋಟೀಸ್ ಮಾಡಿ ಸ್ಥಳಾಂತರಿಸಲು ಮುಂದಾಗುತ್ತಿರುವುದು ಖಂಡನೀಯ. ಅಲ್ಲದೆ, ಭೂಮಿಗಳಿಗೆ ಹಕ್ಕುಪತ್ರ ನೀಡಿದ್ದರೂ ಅವುಗಳ ಮರುಪರಿಶೀಲನೆಗೆ ಮುಂದಾಗಿರುವುದು ಸರಿಯಲ್ಲ. ಕೂಡಲೇ ಈ ರೀತಿಯ ಪ್ರಕ್ರಿಯೆ ಸ್ಥಗಿತಗೊಳಿಸಿ ಸರಕಾರ ಆದೇಶ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಹಾಡಿಗಳು ಹಾಗೂ ಗಿರಿಜನ ಕಾಲೋನಿಗಳ ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿಮಾಡುತ್ತಿರುವುದು ಸರಿಯಲ್ಲ ಈ ವಿಷಯದಲ್ಲಿ ಸರಕಾರ ಕ್ರಮಕೈಗೊಳ್ಳಬೇಕು. ಅಲ್ಲದೆ ಖಾಸಗಿ ತೋಟಗಳಲ್ಲಿರುವ ಮರಗಳ ಗಣತಿ ಮಾಡಿದ ಕ್ರಮವೂ ಸರಿಯಲ್ಲ. ಖಾಸಗಿ ಜಾಗದಲ್ಲಿರುವ ಮರವನ್ನು ಸರಕಾರದ ಸ್ವತ್ತಾಗಿ ಮಾಡಿಕೊಳ್ಳುವ ಯತ್ನ ಇದಾಗಿದೆ. ಇದೇ ರೀತಿ ಮುಂದುವರೆದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಪ್ರಬಲ ಹೋರಾಟ : ಮೇದಪ್ಪ

ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ ಮಾತನಾಡಿ, ಸಿ ಮತ್ತು ಡಿ ಲ್ಯಾಂಡ್ ಬಗ್ಗೆ ಸ್ಪಷ್ಟ ಮಾಹಿತಿಯೇ ಇಲ್ಲ. ಜನರ ಬೇಡಿಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಪ್ರಬಲ ವಿಪಕ್ಷವಾಗಿರುವ ಬಿಜೆಪಿ ಹೋರಾಟ ಮಾಡಿದರೆ ಮಾತ್ರ ನ್ಯಾಯ ದೊರಕುತ್ತದೆ. ಮುಂದಿನ ದಿನಗಳಲ್ಲಿ ಪ್ರಬಲ ಹೋರಾಟ ರೂಪಿಸಲಾಗುವುದು. ಹರಗ ಗ್ರಾಮದಲ್ಲಿ ೨ ಸಾವಿರ ಎಕರೆಯನ್ನು ಸಿ ಮತ್ತು ಡಿ ಲ್ಯಾಂಡ್ ವ್ಯಾಪ್ತಿಗೆ ಅಧಿಸೂಚನೆ ಮಾಡಲಾಗಿದೆ. ಗ್ರಾಮವನ್ನೇ ಒಕ್ಕಲೆಬ್ಬಿಸುವ ಕೆಲಸವಾಗುತ್ತಿದೆ ಎಂದು ದೂರಿದರು.

ಈ ಸಂದರ್ಭ ಕಾರ್ಯಕಾರಿಣಿ ಸಮಿತಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ದಕ್ಷಿಣ ಕನ್ನಡ ಜಿಲ್ಲಾ ಪ್ರಬಾರಿ ಬಿ.ಬಿ. ಭಾರತೀಶ್, ನಿಕಟ ಪೂರ್ವ ಜಿಲ್ಲಾಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್, ನೆಲ್ಲೀರ ಚಲನ್ ಕುಮಾರ್, ಮಹೇಶ್ ಜೈನಿ ಹಾಜರಿದ್ದರು.

ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಸ್ವಾಗತಿಸಿ, ವಕ್ತಾರ ಬಿ.ಕೆ. ಅರುಣ್ ಕುಮಾರ್ ನಿರೂಪಿಸಿ, ವಂದಿಸಿದರು.