ಮಡಿಕೇರಿ, ಜು. ೭: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಸಿರು ಕ್ರಾಂತೀಯ ಹರಿಕಾರ ಡಾ. ಬಾಬು ಜಗಜೀವನ್ ರಾಂ ಅವರ ೪೦ನೇ ಪುಣ್ಯಸ್ಮರಣಾ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಡಾ. ಬಾಬು ಜಗಜೀವನ್ ರಾಂ ಅವರ ಭಾವಚಿತ್ರಕ್ಕೆ ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್, ಜಿ.ಪಂ. ಸಿಇಓ ಆನಂದ್ ಪ್ರಕಾಶ್ ಮೀನಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಲಿಂಗರಾಜ ದೊಡ್ಡಮನಿ, ನಗರಸಭೆ ಸದಸ್ಯ ಸತೀಶ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ದಿವಾಕರ, ದೀಪಕ್ ಪೊನ್ನಪ್ಪ, ಮೋಹನ್ ಮೌರ್ಯ, ಪ್ರೇಮ ಕೃಷ್ಣಪ್ಪ, ಜನಾರ್ಧನ, ಇತರರು ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಖರ್ ಮಾತನಾಡಿ, ಬಾಬು ಜಗಜೀವನ್ ರಾಂ ಅವರು ಕೇಂದ್ರದಲ್ಲಿ ಆಹಾರ ಸಚಿವರಾಗಿ ‘ಹಸಿರು ಕ್ರಾಂತಿ’ ಜಾರಿಗೊಳಿಸಿದರು. ಬಡವರ ಏಳಿಗೆಗೆ ಶ್ರಮಿಸಿದ ಅವರು ಸಮಾಜದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಆಹಾರ, ಕಾರ್ಮಿಕ, ರಕ್ಷಣಾ ಸಚಿವರಾಗಿ ಹಲವು ಮಹತ್ತರ ಕಾರ್ಯಗಳನ್ನು ಕೈಗೊಂಡು ರಾಷ್ಟçದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ನುಡಿದರು.