ಮಡಿಕೇರಿ, ಜು.೭: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಚಿಕ್ಕಳುವಾರ ಹಾಲು ಉತ್ಪಾದಕರ ಸಹಕಾರ ಸಂಘ ನಿ., ಇವರ ಸಂಯುಕ್ತಾಶ್ರಯದಲ್ಲಿ ಚಿಕ್ಕಳುವಾರ ಸಂಘದ ಆವರಣದಲ್ಲಿ ಉಚಿತ ಹಸುಗಳ ಆರೋಗ್ಯ ತಪಾಸಣೆ ಮತ್ತು ಬಂಜೆತನ ನಿವಾರಣೆ ಕುರಿತು ಶಿಬಿರವನ್ನು ನಡೆಸಲಾಯಿತು.
ನಂತರ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಸ್.ಆರ್. ಸುನಿಲ್ ರಾವ್ ಅವರು, ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರವನ್ನು ಬಲವರ್ಧನೆಗೊಳಿಸಬೇಕೆಂಬ ಉದ್ದೇಶದಿಂದ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ೫ ವರ್ಷಗಳನ್ನು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಒಂದು ವಾರಗಳ ಕಾಲ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿ ನೀಡಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಸಹ ‘ಸಹಕಾರದಿಂದ ಸಮೃದ್ಧಿ’ ಎಂಬ ಧ್ಯೇಯದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಅದರಂತೆ ನಾವು ಹಸುಗಳ ಆರೋಗ್ಯ ಮತ್ತು ಬಂಜೆತನ ನಿವಾರಣೆಗೆ ತಪಾಸಣಾ ಶಿಬಿರವನ್ನು ಇಲ್ಲಿ ಆಯೋಜಿಸಲಾಗಿದೆ ಎಂದರು.
ರೈತರು ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುತ್ತಿರುವುದು ಸ್ವಾಗತಾರ್ಹ. ಹಾಸನ ಹಾಲು ಒಕ್ಕೂಟದಿಂದ ವೈದ್ಯಾಧಿಕಾರಿಗಳು ಇಲ್ಲಿಗೆ ಆಗಮಿಸಿ ಕಾರ್ಯಕ್ರಮಕ್ಕೆ ಸಹಕಾರ ನೀಡಿರುವುದಕ್ಕೆ ಧನ್ಯವಾದಗಳನ್ನು ತಿಳಿಸಿದರು. ಹೈನುಗಾರಿಕೆಯು ರೈತರ ಆದಾಯ ವೃದ್ಧಿಗೆ ವ್ಯವಸಾಯದೊಂದಿಗೆ ಪರ್ಯಾಯ ಮಾರ್ಗವಾಗಿದ್ದು, ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಹೈನುಗಾರಿಕೆ ಕ್ಷೇತ್ರದತ್ತ ಒಲವು ತೋರಬೇಕೆಂದು ಹೇಳಿದರು. ಅಲ್ಲದೆ ಸರ್ಕಾರವು ಸಹ ಹಾಲಿನ ಮೇಲೆ ಪ್ರೋತ್ಸಾಹಧನ ನೀಡಿ ಹೈನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವುದು ಶ್ಲಾಘನಾರ್ಹವೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಸುಗಳ ಆರೋಗ್ಯ ತಪಾಸಣೆ ನಡೆಸಿದ ನಂತರ ಮಾತನಾಡಿದ ಹಾಸನ ಹಾಲು ಒಕ್ಕೂಟದ ವೈದ್ಯಾಧಿಕಾರಿ ಡಾ|| ಕಿರಣ್ ಕುಮಾರ್ ಅವರು, ಹಸುಗಳ ಬಂಜೆತನ ನಿವಾರಣೆಗೆ ಅವುಗಳ ಆಹಾರ ಪದ್ಧತಿಯನ್ನು ಬದಲಾಯಿಸಬೇಕು. ಹವಾಮಾನ ವೈಪರೀತ್ಯದ ಸಮಯದಲ್ಲಿ, ಅಂದರೆ ಮಳೆಗಾಲದಲ್ಲಿ ಹೆಚ್ಚಾಗಿ ಹಾಲಿನಲ್ಲಿ ನೀರಿನ ಅಂಶ ಹೆಚ್ಚಾಗುತ್ತದೆ. ಅಂತಹ ಸಮಯದಲ್ಲಿ ಡೈರಿ ಫೀಡ್ ಮತ್ತು ಮಿನರಲ್ ಮಿಶ್ರಣಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಿದಲ್ಲಿ ಹಾಲಿನಲ್ಲಿ ನೀರಿನ ಅಂಶ ಸಮತೋಲನಕ್ಕೆ ಬರುತ್ತದೆ. ಅಂತೆಯೆ ಹಸುಗಳಿಗೆ ಜಂತುಹುಳು ಮಾತ್ರೆಯನ್ನು ೪-೬ ತಿಂಗಳಿಗೊಮ್ಮೆ ನೀಡಬೇಕು. ಒಣಹುಲ್ಲು ಮತ್ತು ಹಸಿಹುಲ್ಲುಗಳನ್ನು ನೀಡಬೇಕು. ಕೊಟ್ಟಿಗೆಯನ್ನು ಸ್ವಚ್ಚವಾಗಿಡಬೇಕು. ಇಲ್ಲವಾದಲ್ಲಿ ಕೆಚ್ಚಲ ಬಾವು ರೋಗ ಉಂಟಾಗುವ ಅಪಾಯವಿರುತ್ತದೆ. ಅಂತಹ ಸಂದರ್ಭಕ್ಕೂ ಸಹ ಕೆಲವು ಔಷಧಿಗಳನ್ನು ಬಳಸಬಹುದಾಗಿದೆ ಎಂದು ಹಸುಗಳ ಆರೋಗ್ಯ ಹಾಗೂ ಅವುಗಳ ಬಂಜೆತನ ನಿವಾರಣೆಗೆ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಪೂರ್ಣ ಮಾಹಿತಿಯನ್ನು ನೀಡಿದರು. ಮತ್ತೋರ್ವ ಅತಿಥಿಗಳಾದ ಹಾಸನ ಹಾಲು ಒಕ್ಕೂಟದ ಜಿಲ್ಲಾ ವಿಸ್ತರಣಾಧಿಕಾರಿ ಬಿ.ವಿ. ವೀಣಾ ಅವರು ಮಾತನಾಡಿ, ಪ್ರಸ್ತುತ ಹಾಸನ ಹಾಲು ಒಕ್ಕೂಟದಲ್ಲಿ ವೈದ್ಯಾಧಿಕಾರಿಗಳ ಕೊರತೆಯಿರುತ್ತದೆ. ಅಂತೆಯೇ ಪಶುವೈದ್ಯಕೀಯ ಆಸ್ಪತ್ರೆಯಲ್ಲಿಯೂ ಸಹ ವೈದ್ಯಾಧಿಕಾರಿಗಳ ಕೊರತೆಯಿದ್ದು ಹಸುಗಳಿಗೆ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ತೊಂದರೆಯಾಗುತ್ತಿರುವುದು ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಕ್ರಮದ ಅಧ್ಯಕ್ಷರು ಹಾಗೂ ಎಲ್ಲಾ ಸಹಕಾರ ಸಂಘಗಳು ಸಂಬAಧಪಟ್ಟವರೊAದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕೆಂದು ಕೋರಿದರು.
ವೇದಿಕೆಯಲ್ಲಿ ಚಿಕ್ಕಳುವಾರ ಎಂ.ಪಿ.ಸಿ.ಎಸ್.ನ ಅಧ್ಯಕ್ಷರಾದ ಮಂಜುನಾಥ್, ಸೋಮವಾರಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ, ಪಿ.ಬಿ. ಮೋಹನ್ ಹಾಗೂ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಯೂನಿಯನ್ ಸಿಬ್ಬಂದಿ ಬಿ.ಸಿ. ಅರುಣ್ ಕುಮಾರ್, ಎಂ.ಪಿ.ಸಿ.ಎಸ್.ನ ಕಾರ್ಯದರ್ಶಿ ಅಕ್ಷಯ್ ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಿದರು.