ವೀರಾಜಪೇಟೆ, ಜು. ೭: ವೀರಾಜಪೇಟೆ-ಗೋಣಿಕೊಪ್ಪ ಮುಖ್ಯರಸ್ತೆಯ ಅಂಬಟ್ಟಿ ಬಳಿ ಹುಲ್ಲು ತುಂಬಿದ್ದ ಲಾರಿಯ ಎಕ್ಸಲ್ ಮುರಿದು ರಸ್ತೆ ಮಧ್ಯೆಯೇ ನಿಂತ ಪರಿಣಾಮ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು.

ಈ ವೇಳೆ ಲಾರಿಯನ್ನು ದಾಟಲು ಯತ್ನಿಸಿದ ಮತ್ತೊಂದು ಲಾರಿಯೂ ರಸ್ತೆ ಬದಿಯಲ್ಲಿ ಸಿಲುಕಿಕೊಂಡಿದ್ದು, ಎರಡೂ ವಾಹನಗಳು ರಸ್ತೆಯಲ್ಲಿ ನಿಲ್ಲಲ್ಪಟ್ಟ ಪರಿಣಾಮ ವಾಹನಗಳ ಸಾಲು ನಿರ್ಮಾಣವಾಗಿ ಸಾರ್ವಜನಿಕರು ಪರದಾಡುವಂತಾಗಿತ್ತು.

ಮಂಗಳವಾರ ಬೆಳಿಗ್ಗೆ ೭.೩೦ ರ ವೇಳೆಗೆ ನಡೆದ ಘಟನೆಯಿಂದ ಅನೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ಸರಿಯಾದ ಸಮಯಕ್ಕೆ ತಲುಪದೆ ಇಕ್ಕಟ್ಟಿಗೆ ಸಿಲುಕಿದರು. ಶಾಲಾ ವಾಹನಗಳು ಸುತ್ತಿ-ಬಳಸಿ ಕೆಲವರು ಬಿಟ್ಟಂಗಾಲ - ಬಾಳುಗೋಡು ಮಾರ್ಗವಾಗಿ ವೀರಾಜಪೇಟೆಗೆ ಬಂದರೆ ಮತ್ತೆ ಕೆಲವು ವಾಹನಗಳು ಹಾತೂರು - ಅಮ್ಮತ್ತಿ ಮಾರ್ಗವಾಗಿ ವೀರಾಜಪೇಟೆಗೆ ತಲುಪಿದವು.

ಮೂರು ಗಂಟೆಗಳ ಕಾಲ ಕೆಲವರು ಅಲ್ಲೆ ಸಾಲಿನಲ್ಲಿ ನಿಂತು ಕುಳಿತು ಸಮಯ ಕಳೆಯುವಂತಾಯಿತು. ವೀರಾಜಪೇಟೆ ಗ್ರಾಮಾಂತರ ಪೊಲೀಸರು ಹಾಗೂ ಸಾರ್ವಜನಿಕರು ಸೇರಿ ಜೆಸಿಬಿ ಮೂಲಕ ಎರಡೂ ವಾಹನಗಳನ್ನು ಬದಿಗೆ ಸರೆಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ತಕ್ಷಣವೇ ಸಂಬAಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಲಾರಿಗಳನ್ನು ತೆರವುಗೊಳಿಸಿದರು.