ಮಡಿಕೇರಿ, ಜು. ೭: ಧಾರಾಕಾರ ಮಳೆಯ ಅಬ್ಬರಕ್ಕೆ ಮಡಿಕೇರಿ ನಗರದ ಅಜ್ಜಮಾಡ ದೇವಯ್ಯ ವೃತ್ತ (ಹಳೆ ಖಾಸಗಿ ಬಸ್ ನಿಲ್ದಾಣ)ದಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯ ಪಾದಚಾರಿ ಮಾರ್ಗದ ಒಂದು ಭಾಗ ಕುಸಿದು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸುರಕ್ಷತಾ ದೃಷ್ಟಿಯಿಂದ ರಸ್ತೆ ಸಂಚಾರವನ್ನು ತಕ್ಷಣ ಸ್ಥಗಿತಗೊಳಿಸಿದ ಪರಿಣಾಮ ನಗರದಲ್ಲಿ ಸುಮಾರು ಎರಡು ಗಂಟೆಗಳ ಕಾಲ ವಾಹನ ಸಂಚಾರ ಅಸ್ತವ್ಯಸ್ತಗೊಂಡು ಸಾರ್ವಜನಿಕರು ಮತ್ತು ವಾಹನ ಸವಾರರು ತೀವ್ರ ಪರದಾಡಿದರು.
ಬೆಳಿಗ್ಗಿನ ವೇಳೆಯಲ್ಲಿ ಮಳೆಯ ಅಬ್ಬರಕ್ಕೆ ರಸ್ತೆಯ ಒಳಭಾಗದ ಮಣ್ಣು ಸಡಿಲಗೊಂಡು ಇಂಟರ್ಲಾಕ್ ಅಳವಡಿಸಿದ್ದ ಪಾದಚಾರಿ ರಸ್ತೆ ಕುಸಿತಗೊಂಡಿದೆ ಎನ್ನಲಾಗುತ್ತಿದೆ. ತಕ್ಷಣ ನಗರಸಭೆ ಅಧಿಕಾರಿ, ಸಿಬ್ಬಂದಿ ವರ್ಗದವರು ದೌಡಾಯಿಸಿದರು. ಪೊಲೀಸರು ಕೂಡ ಸ್ಥಳಕ್ಕಾಗಮಿಸಿ ತಕ್ಷಣ ಆ ಮಾರ್ಗದಲ್ಲಿ ಸಂಚಾರವನ್ನು ಸಂಪೂರ್ಣ ನಿರ್ಬಂಧಗೊಳಿಸಿದರು. ಜೊತೆಗೆ ಶಾಸಕ ಮಂತರ್ ಗೌಡ ಕೂಡ ಆಗಮಿಸಿ ಪರಿಶೀಲಿಸಿದರು.
ಸುಮಾರು ೧೦ ಅಡ್ಡಿ ಉದ್ದ ರಸ್ತೆ ಸಂಪೂರ್ಣ ಕುಸಿತಗೊಂಡಿದ್ದು, ಮಳೆ ಹೀಗೆ ಮುಂದುವರೆದರೆ ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ರಸ್ತೆಯ ಬದಿಯಲ್ಲಿ ರಾಜಕಾಲುವೆ ಹರಿಯುತ್ತಿದ್ದು, ಯಾವುದೇ ಸುರಕ್ಷತಾ ಗೋಡೆಗಳು ಇಲ್ಲದ ಕಾರಣ ರಸ್ತೆ ಕುಸಿತದ ಅನಾಹುತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಕೆಲವು ತಿಂಗಳ ಹಿಂದೆ ರೂ. ೪೦ ಲಕ್ಷ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣಕ್ಕೆ ನಗರಸಭೆ ಮುಂದಾಗಿತ್ತು. ಯಂತ್ರೋಪಕರಣಗಳನ್ನು ಬಳಸಿಕೊಂಡು ಕೆಲಸವನ್ನು ಆರಂಭಿಸಿತ್ತು. ಕಾಮಗಾರಿಯಿಂದ ಮಣ್ಣು ಸಡಿಲವಾಗಿದೆಯೇ ಅಥವಾ ಭಾರಿ ವಾಹನಗಳ ಸಂಚಾರದಿAದ ರಸ್ತೆಗೆ ಒತ್ತಡ ಬಿದ್ದಿದೆಯೇ ಎನ್ನಲಾಗುವುದಿಲ್ಲ ಎಂದು ಪೌರಾಯುಕ್ತ ರಮೇಶ್ ‘ಶಕ್ತಿ’ಗೆ ತಿಳಿಸಿದ್ದಾರೆ.
ತಾತ್ಕಾಲಿಕವಾಗಿ ರಸ್ತೆ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಮರಳಿನ ಮೂಟೆಗಳನ್ನು (ಸ್ಯಾಂಡ್ ಬ್ಯಾಗ್) ಇಟ್ಟು, ಟಾರ್ಪಲ್ ಅಳವಡಿಸಿ ನೀರು ನುಗ್ಗದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ತಜ್ಞರ ಸಲಹೆ ದೊರೆತ ನಂತರವಷ್ಟೆ ರಸ್ತೆ ಸಂಚಾರವನ್ನು ಮುಕ್ತಗೊಳಿಸಲಾಗುವುದು ಎಂದು ಪೌರಾಯುಕ್ತರು ಮಾಹಿತಿ ನೀಡಿದ್ದಾರೆ.
ಶಾಸಕರ ಭೇಟಿ
ವಿಷಯ ತಿಳಿದು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರೀ ಮಳೆಯ ಪರಿಣಾಮ ಘಟನೆ ಸಂಭವಿಸಿದೆ. ಸ್ಯಾಂಡ್ ಬ್ಯಾಗ್ ಅಳವಡಿಸಿ ತಾತ್ಕಾಲಿಕ ಕ್ರಮಕೈಗೊಳ್ಳಲಾಗುವುದು. ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆ ಇದ್ದು, ಸುರಕ್ಷತಾ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿಲಾಗಿದೆ. ಈ ಮಾರ್ಗದಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಶಕ್ತಿ ಗೋಪಾಲಕೃಷ್ಣ ರಸ್ತೆಯನ್ನು ಬಳಸಿಕೊಂಡು ವಾಹನ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಸಾರ್ವಜನಿಕರು ಕೂಡ ಸಹಕರಿಸಬೇಕೆಂದು ಕೋರಿದರು. ೪ಮೂರನೇ ಪುಟಕ್ಕೆ
ನಗರಸಭೆ ಅಧ್ಯಕ್ಷೆ ಪಿ. ಕಲಾವತಿ ಕೂಡ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಭಾರಿ ಮಳೆಯಿಂದ ನೀರು ನುಗ್ಗಿ ಘಟನೆ ಸಂಭವಿಸಿದೆ. ಅಲ್ಲದೆ ತಡೆಗೋಡೆ ಕಾಮಗಾರಿಯೂ ಆರಂಭಿಸಲಾಗಿತ್ತು. ಅಧಿಕಾರಿಗಳು ಹಾಗೂ ತಜ್ಞರ ಸಹಾಯದಿಂದ ಕ್ರಮಗಳನ್ನು ತಕ್ಷಣ ಕೈಗೊಳ್ಳಲಾಗುವುದು ಎಂದು ಕಲಾವತಿ ‘ಶಕ್ತಿ’ಗೆ ತಿಳಿಸಿದ್ದಾರೆ. ತಹಶೀಲ್ದಾರ್ ಶ್ರೀಧರ್ ಕೂಡ ಸ್ಥಳ ಪರಿಶೀಲನೆ ನಡೆಸಿದರು.
ಸಂಚಾರ ಅಸ್ತವ್ಯಸ್ಯ
ರಸ್ತೆ ಕುಸಿತದಿಂದ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿದ ಹಿನ್ನೆಲೆ ಗೌಳಿಬೀದಿ ಜಂಕ್ಷನ್ ಸೇರಿದಂತೆ ನಗರದ ಕಾಲೇಜು ರಸ್ತೆ, ಕೈಗಾರಿಕಾ ಬಡಾವಣೆಯ ದಿ. ಗೋಪಾಲ ಕೃಷ್ಣ ರಸ್ತೆ, ರೇಸ್ಕೋರ್ಸ್ ರಸ್ತೆ, ಮಂಗೇರಿರ ಮುತ್ತಣ್ಣ ವೃತ್ತ, ಜ. ತಿಮ್ಮಯ್ಯ ವೃತ್ತದಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ೨ ಗಂಟೆಗೂ ಹೆಚ್ಚು ಕಾಲ ಸಂಚಾರ ಅಸ್ತವ್ಯಸ್ತಗೊಂಡಿತು. ಸರಕಾರಿ ಹಾಗೂ ಖಾಸಗಿ ಬಸ್ಗಳು ಈ ಮಾರ್ಗದಲ್ಲಿಯೇ ಹೆಚ್ಚಾಗಿ ಸಂಚರಿಸುವದರಿAದ ಚಾಲಕರು ಕೂಡ ಪರದಾಡಿದರು. ಸಂಚಾರಿ ಪೊಲೀಸರು ವಾಹನ ದಟ್ಟಣೆ ನಿಯಂತ್ರಿಸಲು ಹರಸಾಹಸಪಡುವಂತಾಯಿತು. ದಿಢೀರ್ ಕ್ರಮದಿಂದ ವಾಹನ ಚಾಲಕರು ಕೂಡ ಗೊಂದಲಕ್ಕೆ ಒಳಗಾದರು. ಸುತ್ತಿಬಳಸಿ ಓಡಾಡುತ್ತಿದ್ದ ದೃಶ್ಯವೂ ಕಂಡುಬAತು. ಸಂಚಾರಿ ಪೊಲೀಸರು, ಗೃಹರಕ್ಷಕ ದಳದವರು ಮಳೆಯ ನಡುವೆಯೂ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತರಲು ಕಾರ್ಯನಿರ್ವಹಿಸುತ್ತಿದ್ದರು.
ಜನರ ಆಕ್ರೋಶ
ತಡೆಗೋಡೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಡೆಸದ ಪರಿಣಾಮವೇ ಘಟನೆಗೆ ಕಾರಣ ಎಂದು ಜನರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ಭಾರಿ ಮಳೆಗೆ ಇದ್ದ ತಡೆಗೋಡೆ ಕುಸಿತಗೊಂಡಿತ್ತು. ಸಕಾಲದಲ್ಲಿ ಕೆಲಸ ನಡೆಸದೆ ನಿರ್ಲಕ್ಷö್ಯ ತೋರಿದ ಕಾರಣದಿಂದ ಅಪಾಯ ಸಂಭವಿಸಿದೆ. ಸಕಾಲದಲ್ಲಿ ಗುಣಮಟ್ಟದ ತಡೆಗೋಡೆ ನಿರ್ಮಾಣ ಮಾಡಿ, ಭದ್ರತೆ ವಹಿಸಿದ್ದರೆ ಹೀಗಾಗುತ್ತಿರಲಿಲ್ಲ ಎಂದು ಜನರು ತಮ್ಮ ಅಸಮಾಧಾನವನ್ನು ಹೇಳಿಕೊಳ್ಳುತ್ತಿದ್ದಾರೆ.