ಮಡಿಕೇರಿ, ಜು. ೬: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ., ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿ., ಮಡಿಕೇರಿ, ಸಹಕಾರ ಇಲಾಖೆ, ಕೊಡಗು ಜಿಲ್ಲೆ, ಕೊಡಗು ಮಹಿಳಾ ಸಹಕಾರ ಸಂಘ ನಿ., ವೀರಾಜಪೇಟೆ, ವೀರಾಜಪೇಟೆ ಪಿಕಾರ್ಡ್ ಬ್ಯಾಂಕ್ ಹಾಗೂ ವೀರಾಜಪೇಟೆ ಎ.ಪಿ.ಸಿ.ಎಂ.ಎಸ್. ಸಂಯುಕ್ತಾಶ್ರಯದಲ್ಲಿ ವೀರಾಜಪೇಟೆ ಕೋರ್ಟ್ ರಸ್ತೆಯಿಂದ ವೀರಾಜಪೇಟೆ ಮಹಿಳಾ ಸಹಕಾರ ಸಂಘದ ಕಚೇರಿಯವರೆಗೆ ಸ್ವಚ್ಛತಾ ಕಾರ್ಯವನ್ನು ನಡೆಸಲಾಯಿತು. ನಂತರ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾದ ಪಿ.ಯು. ರಾಬಿನ್ ದೇವಯ್ಯ ಅವರು ಕೇಂದ್ರ ಸರ್ಕಾರವು ಪ್ರತಿಯೊಬ್ಬ ಪ್ರಜೆಗೂ ಸರ್ಕಾರದ ಯೋಜನೆಗಳನ್ನು ತಲುಪಿಸಬೇಕೆಂಬ ಉದ್ದೇಶದಿಂದ ಕಾರ್ಯತಂತ್ರ ರಚಿಸಿ ಸಹಕಾರ ಕ್ಷೇತ್ರವು ಗ್ರಾಮಮಟ್ಟದಿಂದ ರಾಜ್ಯಮಟ್ಟ ಹಾಗೂ ದೇಶವ್ಯಾಪಿ ವಿಸ್ತರಿಸಿಕೊಂಡಿರುವುದನ್ನು ಗಮನಿಸಿ, ಸಹಕಾರ ಕ್ಷೇತ್ರವನ್ನು ಬಲವರ್ಧನೆಗೊಳಿಸಬೇಕೆಂಬ ಉದ್ದೇಶದಿಂದ ಸಹಕಾರ ಸಚಿವಾಲಯವನ್ನು ಪ್ರಾರಂಭಿಸಿ ೫ ವರ್ಷಗಳನ್ನು ಪೂರ್ಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಒಂದು ವಾರಗಳ ಕಾಲ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮಾರ್ಗಸೂಚಿ ನೀಡಿದ ಹಿನ್ನಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಸಹ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ ಎಂದರು.

ವೀರಾಜಪೇಟೆ ಮಹಿಳಾ ಸಹಕಾರ ಸಂಘದ ಕಾರ್ಯವ್ಯಾಪ್ತಿಯಲ್ಲಿ ಶುಚಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ ರಸ್ತೆ ಬದಿ, ಮೈದಾನದಲ್ಲಿರುವ ಕಸವನ್ನು ಸಂಗ್ರಹಿಸಿ ಅವುಗಳ ವಿಲೇವಾರಿಗೆ ಕ್ರಮವನ್ನು ಕೈಗೊಳ್ಳಲಾಗಿದೆ ಎಂದರು. ಈ ಕೆಲಸವನ್ನು ನಾವು ಪ್ರತಿನಿತ್ಯ ಕೈಗೊಳ್ಳಬೇಕು. ಆಗ ಮಾತ್ರ ನಮ್ಮ ಸುತ್ತಲಿನ ಪರಿಸರ ಕಸ ಮುಕ್ತವಾಗಿರುತ್ತದೆ. ಪರಿಸರ ಸಂರಕ್ಷಣೆಗೆ ನಾವು ಅತ್ಯಲ್ಪ ಕೊಡುಗೆಯನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು. ಪ್ರತಿಯೊಬ್ಬರು ಪ್ರತಿದಿನ ಈ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ವೀರಾಜಪೇಟೆ ತಾಲೂಕು ಪಿಕಾರ್ಡ್ ಬ್ಯಾಂಕ್‌ನ ಉಪಾಧ್ಯಕ್ಷರಾದ ಬೋಪಣ್ಣ ಅವರು, ಕಸ ಮುಕ್ತ ಪರಿಸರಕ್ಕೆ ಇಂತಹ ಕಾರ್ಯಕ್ರಮಗಳು ಸಹಕಾರಿ. ನಾವು ಗ್ರಾಮಮಟ್ಟದಲ್ಲಿಯೇ ಶುಚಿತ್ವವನ್ನು ಕಾಪಾಡಿಕೊಳ್ಳುವುದರ ಮೂಲಕ ಇತರರಿಗೆ ಮಾದರಿಯಾಗಿರಬೇಕೆಂದು ಸಲಹೆ ನೀಡಿದರು. ಹೇಗೆ ನಮ್ಮ ಮನೆಯನ್ನು ಪ್ರತಿನಿತ್ಯ ಶುಚಿಗೊಳಿಸುತ್ತೇವೆಯೋ ಹಾಗೆಯೇ ನಮ್ಮ ಸುತ್ತಲಿನ ಪರಿಸರವನ್ನು ಸಹ ನಾವು ಪ್ರತಿನಿತ್ಯ ಶುಚಿಗೊಳಿಸುತ್ತಿರಬೇಕೆಂದು ಹೇಳಿದರು. ಮತ್ತೋರ್ವ ಅತಿಥಿಗಳು ಹಾಗೂ ಕಾರ್ಯಕ್ರಮವನ್ನು ಏರ್ಪಡಿಸಲು ಸಹಕರಿಸಿದ ವೀರಾಜಪೇಟೆ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆಯಾದ ಪಿ.ಬಿ. ಗೀತ್ಯಾ ಬೆಳ್ಯಪ್ಪ ಅವರು ಮಾತನಾಡಿ, ಮಹಿಳೆಯರು ಪ್ರತಿಯೊಂದು ಕೆಲಸದಲ್ಲಿಯೂ ಮುಂದಿದ್ದು, ಸ್ವಚ್ಚತಾ ಕೆಲಸಗಳಲ್ಲೂ ಸಹ ಭಾಗಿತ್ವವನ್ನು ಪಡೆದು ಸಂಘದ ಸುತ್ತಮುತ್ತ ಶ್ರಮದಾನ ಕೈಗೊಂಡಿರುವುದು ಶ್ಲಾಘನೀಯ ಎಂದರು.

ವೇದಿಕೆಯಲ್ಲಿ ಜಿಲ್ಲಾ ಸಹಕಾರ ಯೂನಿಯನ್ ನಿದೇಶಕರಾದ ಎ.ಸಿ. ಕುಶಾಲಪ್ಪ, ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಸ್ವಚ್ಛತಾ ಶ್ರಮದಾನಕ್ಕೆ ವೀರಾಜಪೇಟೆ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷರು, ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು, ವೀರಾಜಪೇಟೆ ಪಿಕಾರ್ಡ್ ಬ್ಯಾಂಕ್‌ನ ವ್ಯವಸ್ಥಾಪಕರು, ಸಿಬ್ಬಂದಿ, ಜಿಲ್ಲಾ ಸಹಕಾರ ಯೂನಿಯನ್ ಸಿಬ್ಬಂದಿಗಳು ಸಹಕರಿಸಿದರು.