*ಗೋಣಿಕೊಪ್ಪ, ಜು.೬: ಶಿಕ್ಷಕರು ದ್ವಿಭಾಷಾ ಮಾಧ್ಯಮದ ತರಗತಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಅಗತ್ಯತೆ ಇದೆ ಎಂದು ಡಿಡಿಪಿಐ (ಅಭಿವೃದ್ಧಿ) ಹಾಗೂ ಡಯಟ್ ಪ್ರಾಂಶುಪಾಲ ರಾಮಚಂದ್ರ ರಾಜೆ ಅರಸ್ ಶಿಕ್ಷಕರಿಗೆ ತಿಳಿಸಿದರು. ಗೋಣಿಕೊಪ್ಪ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ನಡೆದ ದ್ವಿಭಾಷಾ ಮಾಧ್ಯಮ ಶಾಲೆಗಳ ಕಾರ್ಯವೈಕರಿ ಕುರಿತು ಶಿಕ್ಷಕರಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬದಲಾಗುತ್ತಿರುವ ಕಾಲಮಾನಕ್ಕೆ ತಕ್ಕಂತೆ ಕನ್ನಡ ಮಾಧ್ಯಮದಲ್ಲಿ ವಿಷಯಗಳನ್ನು ಕಲಿಯುತ್ತಾ ಆಂಗ್ಲ ಭಾಷೆಯಲ್ಲೂ ಸಹ ವಿಷಯ ವಸ್ತುಗಳನ್ನು ಕಲಿತು ಪರಿಣಿತಿ ಹೊಂದಲು ವಿದ್ಯಾರ್ಥಿಗಳಿಗೆ ಸುಲಭ ಮಾರ್ಗವನ್ನು ಹೇಳಿಕೊಡಬೇಕು ಎಂದರು.
ಶಾಲೆಯಲ್ಲಿ ನಡೆಯುತ್ತಿರುವ ಹಲವಾರು ಚಟುವಟಿಕೆಗಳ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿ, ಪೋಷಕರು ಹಾಗೂ ಗ್ರಾಮಸ್ಥರುಗಳಿಗೆ ಸರ್ಕಾರಿ ಶಾಲೆಗಳಲ್ಲಿ ಕೈಗೊಂಡಿರುವ ಹಲವಾರು ಅಭಿವೃದ್ಧಿ ಕಾರ್ಯಗಳ ಕುರಿತು ಅರಿವು ಮೂಡಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ನಂತರ ಸಂಪನ್ಮೂಲ ವ್ಯಕ್ತಿಗಳು ಹಾಗೂ ಶಿಕ್ಷಕರೊಂದಿಗೆ ಚರ್ಚಿಸಿ ಸೇತುಬಂಧ ಕಾರ್ಯಕ್ರಮದ ಉಪಕ್ರಮವಾಗಿ ನಡೆಯುತ್ತಿರುವ ಪರಿವರ್ತನಾ ಅವಧಿಯ ಚಟುವಟಿಕೆಗಳನ್ನು ತರಗತಿಗಳಲ್ಲಿ ಸಮರ್ಪಕವಾಗಿ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಈ ಉಪಕ್ರಮದಲ್ಲಿ ಎದುರಾದ ಸವಾಲುಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಿದರು.
ಡಯಟ್ನ ಹಿರಿಯ ಉಪನ್ಯಾಸಕ, ಕಾರ್ಯಕ್ರಮದ ನೋಡಲ್ ಅಧಿಕಾರಿ ಹೇಮಂತ್ ರಾಜ್ ಮಾತನಾಡಿ, ಶಿಕ್ಷಕರಿಗೆ ಯಾವುದೇ ರೀತಿಯ ಗೊಂದಲಗಳು ಹಾಗೂ ಸವಾಲುಗಳಿದ್ದಲ್ಲಿ ಅಧಿಕಾರಿ ವರ್ಗದವರು ಸಹಕಾರವನ್ನು ನೀಡಲು ಸದಾ ಸಿದ್ದರಿದ್ದಾರೆ. ಒಟ್ಟಾರೆಯಾಗಿ ಸರ್ಕಾರದ ಯೋಜನೆಯು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಲು ಎಲ್ಲರೂ ಒಗ್ಗೂಡಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು. ಡಯಟ್ನ ಉಪನ್ಯಾಸಕ ವಿಜಯ ಮಾತನಾಡಿ, ಮುಂಬರುವ ದಿನಗಳಲ್ಲಿ ಶಿಕ್ಷಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು ನಿರ್ವಹಿಸಬೇಕಾದ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.
ವೀರಾಜಪೇಟೆ ತಾಲೂಕಿನ ಕ್ಷೇತ್ರ ಸಮನ್ವಯಾಧಿಕಾರಿ ಮಹೇಶ್, ಡಯಟ್ನ ತಾಂತ್ರಿಕ ಸಹಾಯಕ ಹರೀಶ್, ಗೋಣಿಕೊಪ್ಪಲು ಸಮೂಹ ಸಂಪನ್ಮೂಲ ವ್ಯಕ್ತಿ ರಾಧ, ಗೋಣಿಕೊಪ್ಪಲು ಶಾಲೆಯ ಮುಖ್ಯ ಶಿಕ್ಷಕ ಕುಮಾರ್, ಸಂಪನ್ಮೂಲ ವ್ಯಕ್ತಿಗಳು, ಶಿಕ್ಷಕರು ಇದ್ದರು.