ಮಡಿಕೇರಿ, ಜು. ೬: ಅಲ್ಲಲ್ಲಿ ಬಿಸಿಲು ಹಾಯ್ದುಬಂದು ಮರೆಯಾಗುತ್ತಿದ್ದರೂ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯ ನದಿ, ಹಳ್ಳ, ತೊರೆಗಳಲ್ಲಿ ನೀರಿನ ಮಟ್ಟ ಏರುತ್ತಿದೆ. ಜಲಪಾತಗಳು ಮೈದುಂಬಿಕೊಳ್ಳಲು ಆರಂಭಿಸಿವೆ.

ಮುಕ್ಕೋಡ್ಲುವಿನ ಕೋಟೆ ಅಬ್ಬಿ ರಮಣೀಯವಾಗಿ ವಿರಾಜಿಸುತ್ತಿದ್ದು ಪ್ರವಾಸಿಗರು ತಂಡೋಪತAಡವಾಗಿ ಆಗಮಿಸುತ್ತಿದ್ದಾರೆ. ಮಡಿಕೇರಿ ಹೊರವಲಯದ ಕೆ.ನಿಡುಗಣೆಯಲ್ಲಿ ಅಬ್ಬಿ ಜಲಪಾತ ನಯನಮನೋಹರವಾಗಿ ಧುಮ್ಮುಕ್ಕುತ್ತಿದ್ದು, ನೀರ ರಭಸಕ್ಕೆ ಸೃಷ್ಟಿಯಾಗುತ್ತಿರುವ ನೀರ ಹನಿಗಳು ನೂರಾರು ಅಡಿ ದೂರದವರೆಗೆ ಹಾರುತ್ತಿದ್ದು, ಭೇಟಿ ನೀಡುತ್ತಿರುವ ಪ್ರವಾಸಿಗರ ಮೈನವಿರೇಳಿಸುತ್ತಿದೆ. ಜಲತರಂಗದ ಸ್ವರ ಸುಂದರ ವಾತಾವರಣ ನಿರ್ಮಿಸುತ್ತಿದೆ.

ಪ್ರವಾಸಿಗರ ಸಂಖ್ಯೆ ಏರುತ್ತಿದ್ದರೂ ಗ್ರಾಮ ಪಂಚಾಯಿತಿಗಳು ಎರಡೂ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡುತ್ತಿರುವುದು ಪ್ರವಾಸಿಗರ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಮುಕ್ಕೋಡ್ಲುವಿನಿಂದ ಮಾಂದಲಪಟ್ಟಿ ಬೆಟ್ಟ ಶ್ರೇಣಿಯ ರಸ್ತೆ ಹಾಗೂ ಅಲ್ಲಿಂದ ಮಡಿಕೇರಿಗೆ ತೆರಳುವ ರಸ್ತೆಗಳು ಅಪಾಯಕಾರಿ ಎನ್ನುವಷ್ಟು ಹದಗೆಟ್ಟಿವೆ. - ಬಿ.ಜಿ. ಅನಂತಶಯನ