ಸಿದ್ದಾಪುರ, ಜು.೬: ಸಿದ್ದಾಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ಹಾಗೂ ಆಂಗ್ಲಭಾಷೆಯ ಬ್ಯಾನರ್‌ಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾ ಸಮಿತಿ ವತಿಯಿಂದ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಒತ್ತಾಯಿಸಿದರು.

ಸಿದ್ದಾಪುರ ಪಟ್ಟಣದಲ್ಲಿ ಬ್ಯಾನರ್‌ಗಳು ತುಂಬಿದ್ದು ಸರಕಾರದ ನಿಯಮವನ್ನು ಗಾಳಿಗೆ ತೂರಿ ಸಂಪೂರ್ಣ ಆಂಗ್ಲ ಭಾಷೆಯಲ್ಲಿ ಬ್ಯಾನರ್‌ಗಳನ್ನು ಅಕ್ರಮವಾಗಿ ಅಳವಡಿಸಿದ್ದಾರೆ ಎಂದು ಆರೋಪಿಸಿ ಸಿದ್ದಾಪುರ ಗ್ರಾ.ಪಂ. ಪಿಡಿಓ ಅವರೊಂದಿಗೆ ಸಮಿತಿ ಸದಸ್ಯರು ಚರ್ಚಿಸಿದರು. ಅಲ್ಲದೆ ಬ್ಯಾನರ್‌ಗಳಲ್ಲಿ ಶೇ. ೬೦ ರಷ್ಟು ಕನ್ನಡವನ್ನು ಬಳಸುವ ಸರಕಾರದ ನಿಯಮದ ಕುರಿತು ಕರವೆ ಕಾರ್ಯಕರ್ತರು ಅಧಿಕಾರಿಗಳಿಗೆ ಮಾಹಿತಿ ನೀಡಿದ ಪ್ರಸಂಗ ನಡೆಯಿತು.

ಕಾರ್ಯಕರ್ತರ ಮನವಿಗೆ ಸ್ಪಂದಿಸಿದ ಅಧಿಕಾರಿ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್‌ಗಳನ್ನು ಕೂಡಲೇ ತೆರವುಗೊಳಿಸುವಂತೆ ಆದೇಶಿಸಿದರು.

ಈ ಸಂದರ್ಭ ಕರವೇ ಸ್ವಾಭಿಮಾನಿ ಬಣದ ಕೊಡಗು ಜಿಲ್ಲಾಧ್ಯಕ್ಷ ಫ್ರಾನ್ಸಿಸ್ ಡಿಸೋಜಾ, ಜಿಲ್ಲಾ ಉಸ್ತುವಾರಿ ತನು ಕಿಶೋರ್, ಜಿಲ್ಲಾ ಉಪಾಧ್ಯಕ್ಷ ವಿ.ಎಸ್. ರಾಜಶೇಖರ್‌ಗೌಡ, ಜಿಲ್ಲಾ ಗೌರವಾಧ್ಯಕ್ಷ ಕೆ. ಚಂದ್ರು, ವೀರಾಜಪೇಟೆ ತಾಲೂಕು ಅಧ್ಯಕ್ಷ ಬೆಲ್ಲು ಕಾರ್ಯಪ್ಪ, ಜಿಲ್ಲಾ ಕಾರ್ಯದರ್ಶಿ ಸುರೇಶ್ ನೆಲ್ಲಿಕಲ್, ಜಿಲ್ಲಾ ಸಲಹೆಗಾರ ಸಜಿಲ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷ ಕೆ.ಎಸ್. ಶಿವ, ನೆಲ್ಲಿಹುದಿಕೇರಿ ಘಟಕದ ಅಧ್ಯಕ್ಷ ಹರೀಶ್, ಉಪಾಧ್ಯಕ್ಷ ರಶಾದ್, ಕಾರ್ಯದರ್ಶಿ ನಂದ ಹಾಜರಿದ್ದರು.