ನಾಪೋಕ್ಲು, ಜು. ೬: ಹಳೇತಾಲೂಕು ನಿವಾಸಿ ಬೊಪ್ಪೇರ ಸಿ. ಕಾವೇರಪ್ಪ (೯೭) ತಾ. ೬ ರಂದು ನಿಧನ ರಾದರು. ಮೃತರು ಓರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಕಾವೇರಪ್ಪ ಅವರು ಸ್ಥಳೀಯ ಗ್ರಾ.ಪಂ. ಮಾಜಿ ಮಂಡಲ ಪಂಚಾಯಿತಿ ಸದಸ್ಯರಾಗಿ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಹಾಗೂ ನಿರ್ದೇಶಕರಾಗಿ, ನಾಪೋಕ್ಲು ಗ್ರಾಹಕರ ಸ್ಟೋರಿನ ನಿರ್ದೇಶಕರಾಗಿ, ನಾಪೋಕ್ಲು ಕೂಡವ ಸಮಾಜದ ನಿರ್ದೇಶಕರಾಗಿ, ನಾಪೋಕ್ಲು ಭಗವತಿ ದೇವಸ್ಥಾನದ ನಿರ್ದೇಶಕರಾಗಿ, ಸಹಕಾರ ಕ್ಷೇತ್ರದ ಧುರೀಣರಾಗಿ, ನಾಪೋಕ್ಲು ಭಾಗದಲ್ಲಿನ ಹಲವು ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದರು. ಹಿರಿಯ ರಾಜಕಾರಣಿಯಾಗಿದ್ದರು. ಬೊಪ್ಪೇರ ಸಿ. ಕಾವೇರಪ್ಪ ಅವರ ನಿಧನಕ್ಕೆ ಮಾಜಿ ಸಚಿವ ಯಂ.ಸಿ. ನಾಣಯ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಾಚೇಟ್ಟಿರ ಕುಶು ಕುಶಾಲಪ್ಪ, ಜೆಡಿಎಸ್ ಪ್ರಮುಖ ಎಂ.ಎ. ಮನ್ಸೂರ್ ಆಲಿ ಸೇರಿದಂತೆ ಹಲವಾರು ಸ್ಥಳೀಯ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಗೌರವಾರ್ಥ ಸ್ಥಳೀಯ ಗ್ರಾಮ ಪಂಚಾಯಿತಿ ಮನವಿಯಂತೆ ಪಟ್ಟಣದ ವ್ಯಾಪಾರಸ್ಥರು ಮೂರರಿಂದ ನಾಲ್ಕು ಗಂಟೆವರೆಗೆ ತಮ್ಮ ತಮ್ಮ ಅಂಗಡಿ ಮಳಿಗೆಗಳನ್ನು ಮುಚ್ಚಿ ಸಂತಾಪ ಸೂಚಿಸಿದರು.