ಮಡಿಕೇರಿ, ಜು. ೫: ಭಾರತ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಕೊಡಗು ಜಿಲ್ಲೆಯಲ್ಲಿಯೂ ನಡೆಯುತ್ತಿದೆ. ಈ ಪರಿಷ್ಕರಣೆ ಹಾಗೂ ಮಾಹಿತಿ ಸಂಗ್ರಹಾ ಕಾರ್ಯಕ್ಕೆ ಚುನಾವಣಾ ಆಯೋಗ ಸರಕಾರದಿಂದ ನೇಮಕಗೊಂಡಿರುವ ಸಿಬ್ಬಂದಿಗಳ ಜತೆಗೆ ಪೂರಕವಾಗಿ ಕೆಲಸ ನಿರ್ವಹಿಸಿ ಯಾರೊಬ್ಬ ಅರ್ಹ ಮತದಾರರೂ ಈ ಬಾರಿಯ ಪಟ್ಟಿಯಿಂದ ಹೊರಗುಳಿಯಬಾರದು ಎಂಬ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾಗಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಕೂಡ ತಮ್ಮ ಕೆಲಸ ನಿರ್ವಹಿಸುತ್ತಿದೆ. ಈ ಕುರಿತು ‘ಶಕ್ತಿ’ಯೊಂದಿಗೆ ಈ ಪಕ್ಷಗಳ ಜಿಲ್ಲಾ ಅಧ್ಯಕ್ಷರುಗಳಾಗಿರುವ ತೀತಿರ ಧರ್ಮಜ ಉತ್ತಪ್ಪ ಹಾಗೂ ನಾಪಂಡ ರವಿ ಕಾಳಪ್ಪ ಅವರುಗಳು ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.

ಪಕ್ಷಗಳ ಕೆಲಸ ಏನು ನಡೆಯುತ್ತಿದೆ?

ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಬಗ್ಗೆ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರ ಮಾಹಿತಿ ಇಂತಿದೆ.

ಶಾಸಕರುಗಳು ಬಿಎಲ್‌ಎ

ಜಿಲ್ಲೆಯಲ್ಲಿ ಎರಡು ಕ್ಷೇತ್ರಗಳಾದ ಮಡಿಕೇರಿ ಹಾಗೂ ವೀರಾಜಪೇಟೆ ಆಯಾ ಕ್ಷೇತ್ರದ ಶಾಸಕರುಗಳಾಗಿರುವ ಡಾ. ಮಂತರ್ ಗೌಡ ಹಾಗೂ ಎ.ಎಸ್. ಪೊನ್ನಣ್ಣ ಅವರುಗಳು ಪಕ್ಷದಿಂದ ನಿಯೋಜಿತವಾಗಿರುವ ಬಿಎಲ್‌ಎಗಳಾಗಿದ್ದಾರೆ. ಇವರೊಂದಿಗೆ ಎರಡೂ ಕ್ಷೇತ್ರಗಳ ಎಲ್ಲಾ ಬೂತ್‌ಗಳಿಗೆ ಬಿಲ್‌ಎ೨ ಗಳನ್ನು ನೇಮಕ ಮಾಡಲಾಗಿದೆ. ಬಿಎಲ್‌ಎ ೨ಗಳಿಗೆ ಈಗಾಗಲೇ ಅಗತ್ಯ ಕಾರ್ಯಾಗಾರಗಳನ್ನು ಅಲ್ಲಲ್ಲಿ ನಡೆಸಲಾಗಿದ್ದು, ಇವರುಗಳು ಆಯೋಗದ ಮೂಲಕ ನಿಯೋಜಿತವಾಗಿರುವ ಬಿಎಲ್‌ಓಗಳೊಂದಿಗೆ ಸಹಕರಿಸಿಕೊಂಡು ಮನೆಮನೆಗಳಿಗೆ ಭೇಟಿಯಿತ್ತು ಜನರಲ್ಲಿ ಜಾಗೃತಿಯೊಂದಿಗೆ ಪಟ್ಟಿಗೆ ಸೇರ್ಪಡೆಗೊಳಿಸುವ ಕೆಲಸದಲ್ಲಿ ಕೈಜೋಡಿಸುತ್ತಿದ್ದಾರೆ ಎಂದು ಧರ್ಮಜ ತಿಳಿಸಿದರು.

ಯಾರೊಬ್ಬ ಅರ್ಹ ಮತದಾರರೂ ಪರಿಷ್ಕರಣೆ ಸಂದರ್ಭ ತಮ್ಮ ಹಕ್ಕಿನಿಂದ ವಂಚಿತರಾಗಬಾರದು ಎಂಬುದು ಪಕ್ಷದ ನಿಲುವಾಗಿದೆ. ಆಯೋಗದ ನಿರ್ದೇಶನದಂತೆ ಪಕ್ಷಕ್ಕೆ ನೀಡಲಾಗಿರುವ ಅವಕಾಶವನ್ನು ಬಳಸಿಕೊಂಡು ಈ ಕೆಲಸ ನಿರ್ವಹಿಸಲಾಗುತ್ತಿದೆ. ಪ್ರಕ್ರಿಯೆಯನ್ನು ಪಕ್ಷದ ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ. ಕೆಲವೆಡೆಗಳಲ್ಲಿ ನಿಯೋಜಿತವಾಗಿರುವ ಆಯೋಗದ ಅಧಿಕೃತ ಸಿಬ್ಬಂದಿಗಳಿಗೆ ಸಮರ್ಪಕವಾಗಿ ಮಾಹಿತಿ ಸಿಗದಂತಹ ಸನ್ನಿವೇಶ ಇರುತ್ತದೆ. ಇಂತಹ ಸಂದರ್ಭದಲ್ಲಿ ಜನತೆಗೆ ಅವರು ತಮ್ಮ ದಾಖಲೆಗಳನ್ನು ಒದಗಿಸಿ ಪಟ್ಟಿಗೆ ಸೇರ್ಪಡೆಗೊಳ್ಳಲು ತಿಳಿಹೇಳುವ ಕೆಲಸ ಮಾಡಲಾಗುತ್ತಿದೆ. ಓರ್ವ ಮತದಾರ ಇಂದು ಒಂದು ಪಕ್ಷ ನಾಳೆ ಮತ್ತೊಂದು ಪಕ್ಷದಲ್ಲಿರಬಹುದು. ಆದರೆ ಅತ್ಯಂತ ಅವಶ್ಯಕ ಹಾಗೂ ತಮ್ಮ ಹಕ್ಕಾಗಿರುವ ಮತದಾರರ ಪಟ್ಟಿಯಿಂದ ಕೈತಪ್ಪಿ ಹೋಗಬಾರದು ಎಂಬ ನಿಟ್ಟಿನಲ್ಲಿ ಪಕ್ಷ ಜಾಗೃತಿ ಮೂಡಿಸುತ್ತಿರುವುದಾಗಿ ಅವರು ತಿಳಿಸಿದರು. ಎಲ್ಲಾ ಪ್ರಕ್ರಿಯೆ ನಿಯೋಜಿತವಾದ ಅಧಿಕೃತ ಸಿಬ್ಬಂದಿ ಮೂಲಕವೇ ಆಗಬೇಕು. ಆದರೆ ಪಕ್ಷದಿಂದ ನಿಯೋಜಿತರಾಗಿರುವವರು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇವರೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿದ್ದಾರೆಂದರು.

ಬಿಜೆಪಿಯ ವಿವರ

ಬಿಜೆಪಿ ಪಕ್ಷದಿಂದ ಮಡಿಕೇರಿ ಕ್ಷೇತ್ರಕ್ಕೆ ಬಿ.ಬಿ. ಭಾರತೀಶ್ ಹಾಗೂ ವೀರಾಜಪೇಟೆಗೆ ರಾಬಿನ್ ದೇವಯ್ಯ ಅವರು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪಕ್ಷದ ಬಿಎಲ್‌ಎ ೧ ಗಳಾಗಿದ್ದಾರೆ. ಇವರೊಂದಿಗೆ ಜಿಲ್ಲೆಯ ಎಲ್ಲಾ ೫೭೨ ಬೂತ್‌ಗಳಿಗೂ ಬಿಎಲ್‌ಎ ೨ ಗಳನ್ನು ಪಕ್ಷ ನೇಮಕ ಮಾಡಿ ಅಗತ್ಯ ತರಬೇತಿ ಕಾರ್ಯಾಗಾರ ನಡೆಸಿದೆ. ಕೊಡಗಿಗೆ ಸಂಬAಧಿಸಿದAತೆ ಅರ್ಹರಾದ ಪ್ರತಿ ಪ್ರಜೆಗೂ ಮತಪಟ್ಟಿಯಲ್ಲಿ ಅವಕಾಶ ಸಿಗಬೇಕು. ಅರ್ಹತೆ ಇಲ್ಲದವರು ಇಲ್ಲಿ ಸೇರ್ಪಡೆಗೊಳ್ಳಬಾರದು ಎಂಬ ನಿಟ್ಟಿನಲ್ಲಿ ಜಾಗ್ರತೆ ವಹಿಸಲಾಗುತ್ತಿದೆ ಎಂದು ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಹೇಳಿದರು.

ಪಕ್ಷದಿಂದ ನಿಯೋಜಿತವಾಗಿರುವವರು ಮನೆಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಬೂತ್‌ಮಟ್ಟ, ಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ ಪಕ್ಷದ ಪ್ರಮುಖರೂ ಈ ಬಗ್ಗೆ ನಿಗಾವಹಿಸಿದ್ದಾರೆ. ವಾಸ್ತವಾಂಶಕ್ಕೆ ತಕ್ಕಂತೆ ಕೆಲಸ ನಡೆಯುತ್ತಿರುವುದಾಗಿ ಅವರು ತಿಳಿಸಿದರು. ಸಂಶಯಗಳಿದ್ದಲ್ಲಿ ಪುಕಾರು ನೀಡಲಾಗುವುದು ಎಂದ ಅವರು ಅಹರ‍್ಯಾರು ಅವಕಾಶ ವಂಚಿತರಾಗಬಾರದು. ಜತೆಗೆ ಜಿಲ್ಲೆಯ ಮೂಲದವರಾಗಿದ್ದು ಹೊರಭಾಗದಲ್ಲಿ ನೆಲೆಸಿರುವವರು ಜಿಲ್ಲೆಯಲ್ಲಿಯೇ ತಮ್ಮ ಮತದ ಹಕ್ಕನ್ನು ಹೊಂದಿಕೊಳ್ಳಲು ಕರೆ ನೀಡುವುದಾಗಿಯೂ ರವಿ ಕಾಳಪ್ಪ ಹೇಳಿದರು. ಜಿಲ್ಲೆಯ ೫೭೨ ಬೂತ್‌ಗಳಲ್ಲಿಯೂ ಅಧಿಕೃತ ಸಿಬ್ಬಂದಿ ಜತೆ ಪಕ್ಷದಿಂದ ನಿಯೋಜಿತರಾಗಿರುವವರು ಸಹಕರಿಸುತ್ತಿದ್ದಾರೆ. ಈಗಾಗಲೇ ಮನೆಮನೆಗೆ ತೆರಳಿ ಫಾರ್ಮ್ ವಿತರಿಸಲಾಗುತ್ತಿದೆ. ವಾಸ್ತವದಂತೆ ಪಟ್ಟಿ ಪರಿಷ್ಕರಣೆ ಅಂತಿಮವಾಗಬೇಕು ಎಂಬುದು ಬಿಜೆಪಿಯ ಚಿಂತನೆಯಾಗಿದೆ ಎಂದು ಅವರು ಹೇಳಿದರು.