ಭಾರತದ ಗಟ್ಟಿ ಪ್ರಜಾಪ್ರಭುತ್ವದಲ್ಲಿ ಉತ್ತಮ ವ್ಯವಸ್ಥೆಗೆ ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ಈ ಮೂರು ಹೆಗ್ಗಂಬಗಳೆAದು ಘೋಷಿಸಲ್ಪಟ್ಟಿದ್ದರೂ ಪತ್ರಿಕಾರಂಗ ಎಂಬುದು ಕೂಡ ನಾಲ್ಕನೆಯ ಆಧಾರವಾಗಿ ಗುರುತಿಸಲ್ಪಟ್ಟಿದೆ.
ಎಲ್ಲವಕ್ಕೂ ಅವುಗಳದ್ದೇ ಆದ ಕಾರ್ಯ ವ್ಯಾಪ್ತಿ ಇದೆ, ನೀತಿ ನಿಯಮಗಳಿವೆ, ಘನತೆ ಗಾಂಭೀರ್ಯಗಳಿವೆ, ಹೊಣೆಗಾರಿಕೆ ಜವಾಬ್ದಾರಿಗಳಿವೆ.
ನ್ಯಾಯಾಂಗ ವ್ಯವಸ್ಥೆಯ ಕಾನೂನುಗಳನ್ನು ಶಾಸಕಾಂಗ ರೂಪಿಸುವುದಾದರೂ ಅದರ ಅನುಷ್ಠಾನವನ್ನು ಪ್ರಶ್ನಿಸುವ ಹಕ್ಕು ಶಾಸಕಾಂಗಕ್ಕಿಲ್ಲ. ಕಾನೂನಿನ ಚೌಕಟ್ಟಿನೊಳಗೆ ನ್ಯಾಯಾಲಯಗಳು ನೀಡುವ ತೀರ್ಪನ್ನು ಪರಿಶೀಲನೆಗೆ ಮೇಲರ್ಜಿ ಮೂಲಕ ಸಲ್ಲಿಸುವ ಅಧಿಕಾರ ಸರ್ಕಾರಕ್ಕೆ ಇದೆ, ಕೆಲವೊಂದು ಸಂದರ್ಭಗಳಲ್ಲಿ ಮಾತ್ರ ಸುಗ್ರೀವಾಜ್ಞೆಯ ಮೂಲಕ ಸರ್ಕಾರ ತಾನೇ ಕಾನೂನನ್ನು ಜಾರಿಗೆ ತರುತ್ತದೆ. ಉಳಿದಂತೆ ನ್ಯಾಯಾಂಗ ವ್ಯವಸ್ಥೆ ಅತ್ಯಂತ ಬಲಿಷ್ಠವಾಗಿ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಒಂದು ದೇಗುಲವಾಗಿ ಭಾರತದ ಪ್ರಜಾಪ್ರಭುತ್ವದಲ್ಲಿ ವಿಶೇಷ ಸ್ಥಾನವನ್ನು ಗಳಿಸಿಕೊಂಡಿದೆ. ಕೆಲವೊಂದು ಭ್ರಷ್ಟಾಚಾರದ ಆರೋಪಗಳು ಹಾಗೂ ವ್ಯಾಪ್ತಿಮೀರಿ ನೀಡಿದ ತೀರ್ಮಾನಗಳ ಹೊರತಾಗಿಯೂ ಬೃಹತ್ ಭಾರತದಲ್ಲಿ ನ್ಯಾಯಾಂಗ ಇಂದಿಗೂ ಕೂಡ ತನ್ನ ಘನತೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತಿರುವುದು ಮತ್ತು ಅಪರಾಧಿಗಳು ಈ ವ್ಯವಸ್ಥೆಗೆ ಮಾತ್ರ ಈ ದೇಶದಲ್ಲಿ ತಗ್ಗಿ ನಡೆಯುವ ಸ್ಥಿತಿಯನ್ನು ಕಾಣುತ್ತಿರುವುದು ಆ ಹೆಗ್ಗಂಬಕ್ಕೆ ಇರುವ ಗೌರವವನ್ನು ತೋರಿಸುತ್ತದೆ.
ಬಲಿಷ್ಟವಾದ ಸರ್ವಾಧಿಕಾರಕ್ಕಿಂತ ದುರ್ಬಲ ಪ್ರಜಾಪ್ರಭುತ್ವವೇ ಸಮಾಜಕ್ಕೆ ಉತ್ತಮ ಎಂಬ ತತ್ವದಡಿ ಭಾರತದ ಪ್ರಜಾಪ್ರಭುತ್ವ ಸೃಷ್ಟಿಗೊಂಡಿದ್ದು ಈ ವ್ಯವಸ್ಥೆಯ ಆಡಳಿತಕ್ಕೆ ಜನರೇ ಆಯ್ಕೆ ಮಾಡಿ ಕಳುಹಿಸುವುದು ಶಾಸಕಾಂಗಕ್ಕೆ..
ಭರವಸೆಗಳನ್ನು ಇಟ್ಟುಕೊಂಡು.. ಕನಸುಗಳನ್ನು ಕಟ್ಟಿಕೊಂಡು.. ಕಲ್ಪನೆಗಳನ್ನು ಹೊತ್ತುಕೊಂಡು ಜನ, ಜನಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸುತ್ತಾರೆ. ತನ್ನ ಕಷ್ಟಗಳಿಗೆ ಸ್ಪಂದಿಸುತ್ತಾರೆ, ತನ್ನ ವ್ಯಾಪ್ತಿ ಅಭಿವೃದ್ಧಿಯಾಗುತ್ತದೆ, ಕ್ಷೇತ್ರದಲ್ಲಿ ಬೆಳವಣಿಗೆಗಳನ್ನು ಕಾಣಬಹುದು... ಹೀಗೆ ಹತ್ತು ಹಲವು ಆಶಾ ಗೋಪುರಗಳ ಮೂಲಕ ನಮ್ಮದೇ ನಾಯಕನನ್ನು ಶಾಸನಸಭೆಗೆ ಮತ್ತು ಲೋಕಸಭೆಗೆ ಕಳುಹಿಸಿಕೊಡುತ್ತಿದ್ದೇವೆ. ಆದರೆ ಸುಮಾರು ೮೦ ವರುಷದ ಈ ಪಯಣದಲ್ಲಿ ಆರಂಭಿಕ ದಿನಗಳಲ್ಲಿ ಇದ್ದಂತಹ ಮೂಲಭೂತ ಸೌಕರ್ಯಗಳ ಕೊರತೆಗಳೇನೂ ನಿರ್ಮೂಲನೆ ಆಗದಿರುವುದು ಶಾಸಕಾಂಗ ವ್ಯವಸ್ಥೆಗೆ ಒಂದು ಕಪ್ಪು ಚುಕ್ಕಿ. ಕೇವಲ ಶಾಸಕರಾದರೆ ಸಾಕೆನಿಸಿದ ಮಂದಿ ಮಂತ್ರಿಗಳಾಗಬೇಕು ಎನ್ನುವ ಹಪಾಹಪಿಯಲ್ಲಿ ಜಾತಿ ವ್ಯವಸ್ಥೆ, ಧರ್ಮ ವ್ಯವಸ್ಥೆ, ಇವುಗಳೊಂದಿಗೆ ಹಣವನ್ನೂ ಚೆಲ್ಲಿ ಅಧಿಕಾರಕ್ಕಾಗಿ ಓಡಾಡುವುದನ್ನು ನಾವು ಕಾಣುತ್ತಿದ್ದೇವೆ. ಸಣ್ಣ ಚುನಾವಣೆಗೂ ಕೋಟ್ಯಂತರ ರೂಪಾಯಿ ವೆಚ್ಚಮಾಡಬೇಕಾದ ಇಂದಿನ ಭಾರತದ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳು ಕೂಡ ಕಡುಭ್ರಷ್ಟರಾಗಿ, ಅಷ್ಟೇ ನಿರ್ಲಿಪ್ತರಾಗಿ ಸಮಾಜದ ಎದುರು ಇರುವುದನ್ನು ಜನ ಮೌನದಿಂದ ನೋಡುತ್ತಿದ್ದಾರೆ.
ಅತ್ಯಂತ ಜವಾಬ್ದಾರಿಯುತ ಮತ್ತು ಕರ್ತವ್ಯ ಪ್ರಜ್ಞೆ ಇರಬೇಕಾದ ಕಾರ್ಯಾಂಗ ವ್ಯವಸ್ಥೆ ಹಳಿ ತಪ್ಪಿ ಯಾರಿಂದಲೂ ಸರಿ ಮಾಡಲಾಗದ ಪರಿಸ್ಥಿತಿಗೆ ತಳ್ಳಲ್ಪಟ್ಟಿರುವುದನ್ನು ಮೂಕಪ್ರೇಕ್ಷಕರಾಗಿ ನಾವು ನೋಡಬೇಕಾದ, ಅಸಹಾಯಕರಾಗಿ ನರಳಬೇಕಾದ ಪರಿಸ್ಥಿತಿ ಈ ದೇಶದಲ್ಲಿ ಉದ್ಭವವಾಗಿರುವುದು ವಿಪರ್ಯಾಸ. ಸರ್ಕಾರಿ ಹುದ್ದೆಗಳನ್ನು ಪಡೆದವರು ಕೆಲಸದ ಖಾತರಿ, ಸಂಬಳದ ಖಾತರಿ ಎಲ್ಲವೂ ಇದ್ದರೂ ಇಂದು ಕರ್ತವ್ಯ ಪ್ರಜ್ಞೆಯಾಗಲಿ, ಜನತೆಯ ಸೇವೆಗಾಗಿ ತಾವು ನೇಮಿಸಲ್ಪಟ್ಟವರು ಎಂಬ ಚಿಂತನೆಯಾಗಲಿ, ಜನತೆಯ ಕೆಲಸ ಮಾಡುವುದಕ್ಕಾಗಿಯೇ ತಾವುಗಳು ಸಂಬಳ ಪಡೆಯುತ್ತಿದ್ದೇವೆ ಎಂಬ ಅಂತ:ಸಾಕ್ಷಿಯಾಗಲಿ ಇಲ್ಲದೆ ಎಲ್ಲವೂ ಕಾರ್ಯಾಂಗ ವ್ಯವಸ್ಥೆಯಲ್ಲಿ ಕೊಚ್ಚಿ ಹೋಗಿವೆ.
ಯಾವುದೇ ಇಲಾಖೆಗಳಲ್ಲಿ ಸಣ್ಣಪುಟ್ಟ ಕೆಲಸಕ್ಕೂ ಲಂಚ ನಿಗದಿಯಾಗಿದೆ. ಜನ ತಾವಾಗಿಯೇ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಾಗದೆ ಮಧ್ಯವರ್ತಿಗಳನ್ನು ಅವಲಂಬಿಸಿಕೊಳ್ಳಬೇಕಾದ ಸ್ಥಿತಿಯಲ್ಲಿ ನಿಯಮಗಳು ರೂಪುಗೊಂಡಿವೆ. ಹಣ ಇದ್ದರೆ ಮಾತ್ರ ಕೆಲಸ ಎನ್ನುವ ಮನಸ್ಥಿತಿಯಲ್ಲಿ ಉಳಿದ ಕೆಲಸಗಳೆಲ್ಲವೂ ಸರ್ಕಾರಿ ಇಲಾಖೆಗಳಲ್ಲಿ ಗೌಣವಾಗಿ ಕಾಣುತ್ತಿರುವುದು ನೈಜ ಸತ್ಯವಾಗಿದೆ.
ಇಂತಹ ಸಂದರ್ಭಗಳಲ್ಲಿಯೇ ನ್ಯಾಯಾಲಯಗಳು ಹಲವೊಮ್ಮೆ ಆಡಳಿತ ಹೇಗಿರಬೇಕು ಎಂಬ ತೀರ್ಮಾನವನ್ನು ಕೊಡುತ್ತಿರುವುದನ್ನು ಗಮನಿಸುತ್ತಿದ್ದೇವೆ. ಯಾವಾಗ ಆಡಳಿತ ನಡೆಸುವ ಸರ್ಕಾರಗಳು ಸರಿಯಾದ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ವಿಫಲವಾಗುತ್ತಾವೋ ಅಂತಹ ಸಂದರ್ಭಗಳಲ್ಲಿ ನ್ಯಾಯಾಲಯಗಳು ಮಧ್ಯಪ್ರವೇಶಿಸಿ ಸರ್ಕಾರಗಳಿಗೆ ಆಡಳಿತದ ನಿರ್ದೇಶನ ಮತ್ತು ಆದೇಶಗಳನ್ನು ನೀಡಿ ವ್ಯವಸ್ಥೆಯನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವುದನ್ನು ಕೂಡ ಹಲವಷ್ಟು ನಿದರ್ಶನಗಳ ಮೂಲಕ ಕಾಣುತ್ತಿದ್ದೇವೆ.
ಶಾಸಕಾಂಗ ಮತ್ತು ಕಾರ್ಯಾಂಗದಲ್ಲಿ ಭ್ರಷ್ಟಾಚಾರ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಸರ್ಕಾರವೇ ರಚಿಸಿರುವ ಸಂಸ್ಥೆ ಕರ್ನಾಟಕದಲ್ಲಿ ಲೋಕಾಯುಕ್ತ. ಗೌರವಾನ್ವಿತ ವೆಂಕಟಚಲ, ಸಂತೋಷ್ ಹೆಗ್ಡೆ ಅಂತಹವರ ನೇತೃತ್ವದಲ್ಲಿ ಗಟ್ಟಿಯಾಗಿ ನೆಲೆ ನಿಂತ ಈ ಸಂಸ್ಥೆಯನ್ನು ಮುಚ್ಚಿ ಭ್ರಷ್ಟಾಚಾರ ನಿಗ್ರಹದಳ ಎಂಬ ಸರಕಾರದ ಕೈಗೊಂಬೆ ರೀತಿಯಲ್ಲಿ ಕೆಲಸ ಮಾಡುವ ಸಂಸ್ಥೆಯನ್ನು ಈ ಹಿಂದೆ ಹುಟ್ಟು ಹಾಕಲಾಗಿತ್ತು. ಮತ್ತೆ ಈಗ ಮರುಜೀವ ಪಡೆದಿರುವ ಲೋಕಾಯುಕ್ತ ಭ್ರಷ್ಟಾಚಾರದ ಬೇಟೆಯೊಡನೆ ಇಂದು ಆಡಳಿತಕ್ಕೂ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುತ್ತಿದೆ.
ರಸ್ತೆ ರಿಪೇರಿ, ಕಸದ ಸಮಸ್ಯೆ, ಕಚೇರಿಯಲ್ಲಿ ಹಾಜರಾತಿ ದಾಖಲಾತಿ, ಮಾರುಕಟ್ಟೆಯ ಶುಚಿತ್ವ... ಹೀಗೆ ಸಂಪೂರ್ಣವಾಗಿ ಆಡಳಿತ ನಡೆಸುವವರು ಕೈಗೊಳ್ಳಬೇಕಾದ ಕೆಲಸಗಳನ್ನು ಉಪಲೋಕಾಯುಕ್ತರು ಕಳೆದೆರಡು ದಿನಗಳಿಂದ ಮಡಿಕೇರಿಯಲ್ಲಿ ಕೈಗೊಂಡಿದ್ದು ಅತೀ ವಿಚಿತ್ರವೆನಿಸಿದರೂ ಜನತೆಗೆ ಅದು ಅನಿವಾರ್ಯವಾಗಿ ಕಂಡಿತು.
ಆಡಳಿತ ವ್ಯವಸ್ಥೆಗಳಲ್ಲಿ ನ್ಯಾಯಾಂಗದ ಹಸ್ತಕ್ಷೇಪ ಅಗತ್ಯವೇ, ಸಂದರ್ಭೋಚಿತವೇ, ಸರಿಯೇ ಎನ್ನುವ ಪ್ರಶ್ನೆಗಳ ಮಧ್ಯೆ ಇಂದಿನ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಎನ್ನುವ ಸತ್ಯವನ್ನು ಜನ ಮನಗಂಡಿದ್ದಾರೆ. ಸಹಜವಾಗಿ ಆಗಬೇಕಾದ ಜನರ ಕೆಲಸಕ್ಕೂ ಆಡಳಿತ ವ್ಯವಸ್ಥೆಯಲ್ಲಿ ಆಗುತ್ತಿರುವ ವಿಳಂಬ, ಮಾನಸಿಕ ಹಾಗೂ ದೈಹಿಕ ಹಿಂಸೆ, ಕೆಲಸವಾಗಬೇಕಾದರೆ ಹಣ ಕೊಡಲೇಬೇಕಾದ ಸ್ಥಿತಿ.. ಹೀಗೆ ನೊಂದ ಜನ ಲೋಕಾಯುಕ್ತದಂತ ವ್ಯವಸ್ಥೆಯಿಂದ ಏನೋ ಬದಲಾವಣೆಯ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ, ಸ್ವಲ್ಪವಾದರೂ ಸುಧಾರಣೆಯನ್ನು ಕಾಣಬಹುದು ಎಂದು ಭರವಸೆಯನ್ನು ಹೊಂದಿದ್ದಾರೆ.
ಶಾಸಕಾಂಗ ಮತ್ತು ಕಾರ್ಯಾಂಗದ ಆಡಳಿತ ಕುಸಿದಾಗ ನ್ಯಾಯಾಂಗ ಮಧ್ಯಪ್ರವೇಶಿಸುತ್ತಿದೆ. ಇದು ಸರಿಯೇ ಎನ್ನುವ ಜಿಜ್ಞಾಸೆಯ ನಡುವೆ ಅನಿವಾರ್ಯ ಎಂಬ ನಿಲುವು ಜನರದ್ದಾಗಿದೆ.
ಜಿ. ಚಿದ್ವಿಲಾಸ್
ಸಂಪಾದಕ