ಕುಶಾಲನಗರ, ಜು. ೪: ಬಲವಂತ ಮತಾಂತರ ಪ್ರಕರಣದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ನಡೆದ ಜಾಗೃತಿ ಜಾಥಾ ಸಂದರ್ಭ ಹಿಂದೂ ಸಂಘಟನೆಗಳ ಮುಖಂಡರು ಪ್ರಚೋದನಕಾರಿ ಭಾಷಣ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಇಬ್ಬರು ಹಿಂದೂ ಕಾರ್ಯಕರ್ತರ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಹಿಂದೂ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಬಲವಂತದ ಮತಾಂತರ ಖಂಡಿಸಿ ಕುಶಾಲನಗರದಲ್ಲಿ ನಡೆದ ಜನಜಾಗೃತಿ ಆಂದೋಲನ ಸಂದರ್ಭ ಪ್ರಚೋದನಾಕಾರಿ ಭಾಷಣ ಮಾಡಲಾಗಿದೆ ಎಂಬ ದೂರಿನನ್ವಯ ಇಬ್ಬರ ವಿರುದ್ಧ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಜನಜಾಗೃತಿ ಆಂದೋಲನದಲ್ಲಿ ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕ ಸತೀಶ್ ದಾವಣಗೆರೆ ಕೋಮು ಸೌಹಾರ್ದ ಕದಡುವ ರೀತಿಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಹಾಗೂ ಇವರಿಗೆ ಕಾರ್ಯಕ್ರಮ ಸಂಘಟಕ ಅಮೃತ್ ರಾಜ್ ಸಹಕಾರ ನೀಡಿದ್ದಾರೆ ಎಂದು ಆರೋಪಿಸಿ ಜಬೀವುಲ್ಲಾ ಎಂಬವರು ನೀಡಿದ ದೂರಿನನ್ವಯ ಇಬ್ಬರ ಮೇಲೆ ಬಿಎನ್ನ್ಎಸ್ ೧೯೨, ೨೯೯, ೩(೫) ಪ್ರಕರಣ ದಾಖಲಾಗಿದೆ.

ದೂರಿನ ಮೇರೆಗೆ ಠಾಣೆಗೆ ಹಾಜರಾದ ಮುಖಂಡರಾದ ಅಮೃತರಾಜ್ ಅವರಿಗೆ ಜಾಮೀನು ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.