ಸುಂಟಿಕೊಪ್ಪ, ಜು. ೪: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕೇಂದ್ರದ ವಾರ್ಷಿಕೋತ್ಸವ ಬೆಟ್ಟಗೇರಿಯ ಲಕ್ಷಿö್ಮ ದೇವಿ ಸ್ವಸಹಾಯ ಸಂಘದಲ್ಲಿ ನಡೆಯಿತು.
ಸಮಾರಂಭವನ್ನು ಮಡಿಕೇರಿ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪುರುಷೋತ್ತಮ್ ಉದ್ಘಾಟಿಸಿ ಮಾತನಾಡಿ, ಯೋಜನೆಯ ವತಿಯಿಂದ ಕೇಂದ್ರದ ಸದಸ್ಯರಿಗಾಗಿ ಸಾಕಷ್ಟು ಯೋಜನೆಗಳನ್ನು ನೀಡಲಾಗುತ್ತಿದೆ. ಅದನ್ನು ಸರಿಯಾದ ರೀತಿಯಲ್ಲಿ ಸದ್ಭಳಕೆ ಮಾಡುವ ಮೂಲಕ ಸದಸ್ಯರು ಅಭಿವೃದ್ಧಿ ಹೊಂದಬಹುದಾಗಿದೆ ಎಂದರು. ಸ್ವಸಹಾಯ ಸಂಘದ ಸದಸ್ಯರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಒಕ್ಕೂಟದ ಅಧ್ಯಕ್ಷೆ ಲೀಲಾವತಿ ವಹಿಸಿದ್ದರು.
ಈ ಸಂದರ್ಭ ಸಂಘದ ಹಿರಿಯ ಸದಸ್ಯರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೇಂದ್ರದ ಸದಸ್ಯರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಪುಷ್ಪ, ವಲಯದ ಮೇಲ್ವಿಚಾರಕ ಸಂತೋಷ್, ಜ್ಞಾನವಿಕಾಸ ಸಮನ್ವಯ ಅಧಿಕಾರಿ ಮಾಲಿನಿ, ಸೇವಾ ಪ್ರತಿನಿಧಿ ಚಿತ್ರಾ ಸುರೇಶ್, ಸದಸ್ಯರಾದ ರಾಜೇಶ್ ಹಾಗೂ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.