ಕುಶಾಲನಗರ, ಜು. ೩: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದ ೩ ದಿನಗಳಿಂದ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಕುಶಾಲನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಕಾವೇರಿ ನದಿ ನೀರಿನ ಮಟ್ಟದಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡಿದೆ.

ಕುಶಾಲನಗರ ಕೊಪ್ಪ ಗಡಿಭಾಗದ ಕಾವೇರಿ ಸೇತುವೆಯ ಕೆಳಭಾಗದಲ್ಲಿ ಶುಕ್ರವಾರ ಸಂಜೆ ವೇಳೆಗೆ ಸುಮಾರು ೫ ಅಡಿಗಳಷ್ಟು ಏರಿಕೆ ಗೋಚರಿಸಿದೆ. ಭಾಗಮಂಡಲ - ತಲಕಾವೇರಿ ವ್ಯಾಪ್ತಿಯಲ್ಲಿ ಗುರುವಾರ ೩೩.೨ ಮಿಲಿ ಮೀಟರ್ ಪ್ರಮಾಣದ ಮಳೆಯಾದ ಬಗ್ಗೆ ವರದಿಯಾಗಿದೆ.

ಕಳೆದ ಬಾರಿ ಇದೇ ಅವಧಿಯಲ್ಲಿ ಕುಶಾಲನಗರ ಕಾವೇರಿ ಸೇತುವೆ ಕೆಳಭಾಗ ೨೩ ಅಡಿಗಳಷ್ಟು ಎತ್ತರದಲ್ಲಿ ನೀರು ಹರಿಯುವುದರೊಂದಿಗೆ ನದಿ ತಟದ ವ್ಯಾಪ್ತಿಯ ನಾಗರಿಕರು ಆತಂಕಕ್ಕೆ ಒಳಗಾಗಿದ್ದ ಪರಿಸ್ಥಿತಿ ಎದುರಾಗಿರುವುದನ್ನು ಸ್ಮರಿಸಬಹುದು.

ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಸರಾಸರಿ ಈ ಸಾಲಿನಲ್ಲಿ ಇದುವರೆಗೆ ಒಟ್ಟು ೨೦೫.೬೯ ಮಿಲಿ ಮೀಟರ್ ಪ್ರಮಾಣದ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೭೯೬.೫೪ ಮಿಲಿ ಮೀಟರ್ ಪ್ರಮಾಣದ ಮಳೆ ಆಗಿತ್ತು. ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಮೋಡಕವಿದ ವಾತಾವರಣದೊಂದಿಗೆ ಅಲ್ಪಸಲ್ಪ ಮಳೆಯಾಗಿದೆ.