ಮುಳ್ಳೂರು, ಜು. ೪: ಸಮೀಪದ ಶನಿವಾರಸಂತೆ ಕಾವೇರಿ ಪ.ಪೂ. ಕಾಲೇಜಿನ ಮತದಾನ ಸಾಕ್ಷರತಾ ಸಂಘದ ವತಿಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಅರಿವು ಕಾರ್ಯಕ್ರಮದ ಉದ್ದೇಶದ ಕುರಿತು ಕಾವೇರಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಹೆಚ್.ಎನ್. ದೇವರಾಜ್ ಮಾತನಾಡಿ, ಪ್ರತಿಯೊಬ್ಬ ಭಾರತೀಯನಿಗೆ ಹೆಮ್ಮೆ ತರುವಂತ ಮತದಾನದ ಹಕ್ಕನ್ನು ನಮ್ಮ ದೇಶದ ಸಂವಿಧಾನ ನೀಡಿದೆ. ಅಮೂಲ್ಯವಾದ ಹಕ್ಕನ್ನು ಪಡೆಯಬೇಕಾದರೆ ಮತದಾರರ ಪಟ್ಟಿಯಲ್ಲಿ ಮತದಾರನ ಹೆಸರು ಇರಬೇಕು. ಆದರೆ ಈ ಹಕ್ಕು ಕೆಲವೊಮ್ಮೆ ದುರ್ಬಳಕೆಯಾಗುತ್ತದೆ. ಇದನ್ನು ತಡೆದು ನಿಜವಾದ ಪೌರತ್ವ ಪಡೆದಿರುವವರನ್ನು ಗುರುತಿಸಿ ನಕಲಿ ಮತದಾರರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಕೇಂದ್ರ ಸರಕಾರ ಈ ವಿಶೇಷ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕಾಲೇಜು ವತಿಯಿಂದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕಾಲೇಜು ಉಪನ್ಯಾಸಕ ಕಾಂತರಾಜ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬAಧಪಟ್ಟ ಬಿಎಲ್ಒಗಳು ಮನೆಗೆ ಬಂದ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ನೀಡಿ ಅವರಿಗೆ ಸ್ಪಂದಿಸಿ ಮತದಾನದ ಹಕ್ಕನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎಎಲ್ಸಿ ಮುಖ್ಯಸ್ಥ ಮಂಜುನಾಥ್, ಉಪನ್ಯಾಸಕರು ಹಾಜರಿದ್ದರು. ವಿದ್ಯಾರ್ಥಿಗಳು ಪಟ್ಟಣದ ಮುಖ್ಯ ಬೀದಿಗಳಲ್ಲಿ ಮತದಾನ ಮಹತ್ವ ಕುರಿತಾದ ಘೋಷಣೆ ಕೂಗುತ್ತಾ ಮೆರವಣಿಗೆ ಮೂಲಕ ಸಾಗಿ ಅರಿವು ಮೂಡಿಸಿದರು.