ಮಡಿಕೇರಿ, ಜು. ೩: ಐತಿಹಾಸಿಕ ಶ್ರೀ ಓಂಕಾರೇಶ್ವರ ಹಾಗೂ ಆಂಜನೇಯ ದೇವಾಲಯ ಆವರಣದಲ್ಲಿ ಇದುವರೆಗೆ ಶೌಚಾಲಯ ವ್ಯವಸ್ಥೆಯಿಲ್ಲದೆ ಭಕ್ತಾದಿಗಳಿಗೆ - ಪ್ರವಾಸಿಗರಿಗೆ ತೀವ್ರ ಅನಾನುಕೂಲವುಂಟಾಗಿತ್ತು. ಇದನ್ನು ಪರಿಗಣಿಸಿ ಪ್ರವಾಸೋದ್ಯಮ ಇಲಾಖೆಯಿಂದ ಸುಮಾರು ರೂ. ೩೫ ಲಕ್ಷ ವೆಚ್ಚದಲ್ಲಿ ಶೌಚಾಲಯವನ್ನು ದೇವಾಲಯ ಹಿಂಭಾಗದ ಸ್ಥಳದಲ್ಲಿ ನಿರ್ಮಿಸಲಾಗಿದೆ. ಅಲ್ಲದೆ, ಅದೇ ಸ್ಥಳದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದು ಈ ವ್ಯವಸ್ಥೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಐತಿಹಾಸಿಕ ದೇವಾಲಯದಲ್ಲಿ ಅಗತ್ಯವಾಗಿದ್ದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇನ್ನೂ ದೇವಾಲಯದ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭ ಮಡಿಕೇರಿ ನಗರಸಭಾಧ್ಯಕ್ಷೆ ಕಲಾವತಿ, ಪ್ರವಾಸೋದ್ಯಮ ಇಲಾಖಾ ಹಂಗಾಮಿ ಉಪ ನಿರ್ದೇಶಕ ಶಶಿಧರ್, ಕನ್ಸಲ್‌ಟೆಂಟ್ ಜತೀನ್, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೇವರಾಜ್, ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ, ಪ್ರಕಾಶ್ ಆಚಾರ್ಯ, ವೀಣಾಕ್ಷಿ, ಸಂತೋಷ್ ಭಟ್, ಜಿ. ರಾಜೇಂದ್ರ ಮೊದಲಾದವರಿದ್ದರು.