ಮಡಿಕೇರಿ, ಜು. ೨: ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರವಿ ಚಿಯಣ್ಣ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲತೀಶ್ ಆರ್. ಅವರು ವಿದ್ಯಾರ್ಥಿ ನಾಯಕರಿಗೆ ನಾಯಕತ್ವ, ಜವಾಬ್ದಾರಿ, ಶಿಸ್ತು ಹಾಗೂ ಸೇವಾ ಮನೋಭಾವದ ಮಹತ್ವವನ್ನು ತಿಳಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪಾ ಪೊನ್ನಮ್ಮ ಅವರು ವಿದ್ಯಾರ್ಥಿ ನಾಯಕತ್ವವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು, ಉತ್ತಮ ನಾಯಕರು ಸಮಾಜದ ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ವಿದ್ಯಾರ್ಥಿ ಪರಿಷತ್ತಿನ ನೂತನ ಪದಾಧಿಕಾರಿಗಳಿಗೆ ಬ್ಯಾಡ್ಜ್ಗಳು ಹಾಗೂ ಅಧಿಕಾರದ ಚಿಹ್ನೆಗಳನ್ನು ವಿತರಿಸಿ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಶಾಲಾ ನಾಯಕನಾಗಿ ಕೆ.ಪಿ. ಪ್ರಧಾನ್ ಬಸಪ್ಪ ಹಾಗೂ ಉಪನಾಯಕಿಯಾಗಿ ಇಂಪಾ ಕೆ.ಕೆ. ಅಧಿಕಾರ ಸ್ವೀಕರಿಸಿದರು. ವಿದ್ಯಾರ್ಥಿ ಪರಿಷತ್ತಿನ ಎಲ್ಲಾ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.