ಕುಶಾಲನಗರ, ಜು. ೨: ಸ್ವಚ್ಛತೆಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಪೌರಕಾರ್ಮಿಕರ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ರಾಜ್ಯ ಸರ್ಕಾರ ಹಲವು ಕಲ್ಯಾಣ ಹಾಗೂ ಸುರಕ್ಷತಾ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಹೇಳಿದರು.
ಪಟ್ಟಣದ ಪಿ.ಎಂ. ಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಗ್ಲೌಸ್, ಮಾಸ್ಕ್, ಗಂಬೂಟ್, ಸ್ಯಾನಿಟೈಸರ್, ಸೋಪ್ ಹಾಗೂ ರೇನ್ಕೋಟ್ ಒಳಗೊಂಡ ಸುರಕ್ಷತಾ ಕಿಟ್ಗಳನ್ನು ವಿತರಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಸ್ವಚ್ಛ ನಗರ ನಿರ್ಮಾಣದ ನೈಜ ಶಿಲ್ಪಿಗಳಾಗಿದ್ದು, ಚರಂಡಿ, ಕಸ ಹಾಗೂ ತ್ಯಾಜ್ಯಗಳನ್ನು ಸ್ವಚ್ಛಗೊಳಿಸುವ ವೇಳೆ ಅವರ ಆರೋಗ್ಯಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಸರ್ಕಾರ ಅಗತ್ಯ ಸುರಕ್ಷತಾ ಪರಿಕರಗಳನ್ನು ಒದಗಿಸುತ್ತಿದೆ. ಕೆಲಸ ನಿರ್ವಹಿಸುವ ಸಂದರ್ಭ ಪ್ರತಿಯೊಬ್ಬ ಪೌರಕಾರ್ಮಿಕರೂ ಈ ಸುರಕ್ಷತಾ ಪರಿಕರಗಳನ್ನು ಕಡ್ಡಾಯವಾಗಿ ಬಳಸಬೇಕು ಎಂದು ಶಾಸಕ ಡಾ. ಮಂತರ್ ಗೌಡ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ವಿ.ಪಿ. ಶಶಿಧರ್, ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ವಿ.ಎಸ್. ಆನಂದ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ಟಿ.ಜಿ. ಗಿರೀಶ್ ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.