ಸಿದ್ದಾಪುರ, ಜು. ೨: ನೆಲ್ಲಿಹುದಿಕೇರಿ ಸರ್ಕಾರಿ ಶಾಲೆಯ ಸಮೀಪದ ರಸ್ತೆಯಲ್ಲಿ ಕಾಡಾನೆಗಳನ್ನು ಕಂಡು ಭಯಭೀತರಾಗಿ ಶಾಲೆಯ ಮಕ್ಕಳು ಸಂಜೆ ಓಡಿ ರಸ್ತೆ ಬದಿಯ ಕಟ್ಟಡದಲ್ಲಿ ಕುಳಿತುಕೊಂಡು ಅಪಾಯದಿಂದ ಪಾರಾದ ಘಟನೆ ಗುರುವಾರ ಸಂಜೆ ಸಂಭವಿಸಿದೆ.

ನೆಲ್ಲಿಹುದಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಮೀಪ ಇರುವ ಕಾಫಿ ತೋಟದೊಳಗೆ ಮರಿಯಾನೆ ಸೇರಿದಂತೆ ಮೂರು ಕಾಡಾನೆಗಳು ಶಾಲೆ ರಸ್ತೆಯಲ್ಲಿ ಸಂಚರಿಸುತ್ತಿದ್ದವು. ಈ ಸಂದರ್ಭದಲ್ಲಿ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ಮಕ್ಕಳು ಕಾಡಾನೆಗಳನ್ನು ಕಂಡು ಭಯಭೀತರಾಗಿ ರಸ್ತೆ ಬದಿಯ ಕಟ್ಟಡಕ್ಕೆ ಓಡಿಹೋಗಿ ಅಪಾಯದಿಂದ ತಪ್ಪಿಸಿಕೊಂಡರು ಎಂದು ಸ್ಥಳೀಯರು ತಿಳಿಸಿದ್ದಾರೆ. ಕಾಡಾನೆಗಳ ಹಿಂಡು ಬಳಿಕ ಬೇರೊಂದು ಕಾಫಿ ತೋಟದೊಳಗೆ ತೆರಳಿದ ಬಳಿಕ ಮಕ್ಕಳು ಮನೆಗೆ ತೆರಳಿದರು ಎನ್ನಲಾಗಿದೆ.

- ವಾಸು