ಶ್ರೀಮಂಗಲ, ಜು. ೧: ೨೦೨೬-೨೭ನೇ ಶೈಕ್ಷಣಿಕ ಸಾಲಿನ ಶ್ರೀಮಂಗಲ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ನಡೆಯಿತು.

ಸಂಸ್ಥೆಯ ಪ್ರಾಂಶುಪಾಲ ಮುಲ್ಲೇಂಗಡ ಸೋಮಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಸಂಘದ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಉಪನ್ಯಾಸಕ ಚೊಟ್ಟೆಯಂಡಮಾಡ ವಿಶ್ವನಾಥ್ (ಬೋಸ್) ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ವಿದ್ಯಾರ್ಥಿ ಸಂಘದ ಚಟುವಟಿಕೆಗಳು ಅತ್ಯಂತ ಅಗತ್ಯವಾಗಿದ್ದು, ಶಿಕ್ಷಣದ ಜೊತೆಗೆ ನಾಯಕತ್ವ ಮತ್ತು ವ್ಯಕ್ತಿತ್ವ ವಿಕಸನಕ್ಕೂ ಸಹಕಾರಿಯಾಗುತ್ತವೆ ಎಂದು ಹೇಳಿದರು. ಕಾರ್ಯದರ್ಶಿ ಕಾಳಿಮಾಡ ಪದ್ಮ ಮಾತನಾಡಿ, ಉತ್ತಮ ಸ್ನೇಹ ಮತ್ತು ಸಕಾರಾತ್ಮಕ ವಾತಾವರಣವು ವಿದ್ಯಾರ್ಥಿ ಜೀವನದ ಯಶಸ್ಸಿಗೆ ಪ್ರಮುಖವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಬೋಡಂಗಡ ಅಯ್ಯಪ್ಪ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತನ್ನು ಪಾಲಿಸಿ ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಉತ್ತಮ ನಾಗರಿಕರಾಗಿ ರೂಪುಗೊಳ್ಳಬೇಕು ಎಂದು ಸಲಹೆ ನೀಡಿದರು.

ಆಡಳಿತ ಮಂಡಳಿ ಖಜಾಂಚಿ ವಿನಯ್, ನಿರ್ದೇಶಕರಾದ ತಡಿಯಂಗಡ ಜಯರಾಜ್, ಚೆಟ್ಟಂಗಡ ಕಂಬ ಕಾರ್ಯಪ್ಪ, ದೇಕಮಾಡ ನವೀನ್, ಅಜ್ಜಮಾಡ ಸಾವಿತ್ರಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ರತ್ನಮ್ಮ ಹೆಚ್.ಬಿ., ಕಾಲೇಜು ವಿಭಾಗದ ಸಂಘದ ಉಪಾಧ್ಯಕ್ಷೆ ಸುಜಾತ, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ನಾಗೇಶ್ ನಿರೂಪಿಸಿ. ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷೆ ಅಕ್ಕಮ್ಮ ವಂದಿಸಿದರು.