ಮಡಿಕೇರಿ, ಜು. ೧: ಕರ್ನಾಟಕ ರಾಜ್ಯ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಕೊಡಗು ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಮಡಿಕೇರಿಯ ರಾಜ್‌ದರ್ಶನ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಸಮಾಜದ ಯುವಕರು ಸರ್ಕಾರಿ ಉದ್ಯೋಗಗಳನ್ನು ಪಡೆಯುವತ್ತ ಹೆಚ್ಚಿನ ಗಮನಹರಿಸಬೇಕು. ಶಿಕ್ಷಣ ಮತ್ತು ಸಂಘಟನೆಯ ಬಲದಿಂದ ಸಮಾಜವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲ ೨೭ ಪಂಗಡದವರು ಒಂದಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಶ್ರೀ ನಾರಾಯಣ ಗುರುಗಳ ಆದರ್ಶಗಳನ್ನು ಪಾಲಿಸಿ, ಸಮಾಜದ ಮಕ್ಕಳಿಗೆ ಮಾರ್ಗದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದರು.
ಮುಖ್ಯ ಭಾಷಣ ಮಾಡಿದ ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಎಸ್. ಭಾರ್ಯ, ವಿದ್ಯಾರ್ಥಿಗಳು ಸ್ಪಷ್ಟ ಗುರಿಯೊಂದಿಗೆ ಶಿಕ್ಷಣ ಪಡೆಯಬೇಕು. ಪೋಷಕರು ಮಕ್ಕಳ ಬೆಳವಣಿಗೆಯ ಬಗ್ಗೆ ಕಾಳಜಿ ವಹಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ಸಲಹೆ ನೀಡಿದರು.
ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಲಿಂಗಪ್ಪ ಪೂಜಾರಿ ಮಾತನಾಡಿ, ನಾವು ಸಂಘಟಿತರಾಗಬೇಕು. ಪ್ರತಿ ಹಂತದಲ್ಲೂ ಸಂಘಟನೆ ಜೊತೆಗೆ ಜನಾಂಗದವರು ಇರಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಈಡಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ, ಸಂಘಟನೆಯ ಮೂಲಕ ಸಮಾಜದ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ವಿವಿಧ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಜಿಲ್ಲಾ ಬಿಲ್ಲವ ಸಮಾಜ ಒಕ್ಕೂಟದ ಕಾರ್ಯದರ್ಶಿ ಪ್ರದೀಪ್ ಕರ್ಕೇರ, ವೀರಾಜಪೇಟೆ ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಗಣೇಶ್ ಹಾಗೂ ಮಡಿಕೇರಿ ತಾಲೂಕು ಅಧ್ಯಕ್ಷೆ ಲೀಲಾವತಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಚಂದ್ರಹಾಸ್ ಸೇರಿದಂತೆ ವಿವಿಧ ಗಣ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸಮಾಜದ ಗಣ್ಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಸುಧೀರ್ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಮುಖೇಶ್ ವಂದಿಸಿದರು, ಜಯಪ್ಪ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಸಮಾಜದ ಸದಸ್ಯರು ಭಾಗವಹಿಸಿದ್ದರು.