ಕುಶಾಲನಗರ, ಜು. ೧: ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕುಶಾಲನಗರ ಬಾಲಕಿಯರ ಸರಕಾರಿ ಪ್ರೌಢಶಾಲೆಯಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕುಶಾಲನಗರದ ಉದ್ಯಮಿ ದಿವಾಕರ ದಾಸ್ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪತ್ರಿಕೋದ್ಯಮದ ಗೌರವ, ಘನತೆ, ಜವಬ್ದಾರಿ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಹೊಂದುವ ಅಗತ್ಯವಿದೆ. ಸರಕಾರಿ ಶಾಲಾ ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ತೋರಿದ ಉದಾಹರಣೆಗಳಿವೆ. ಸಾಮಾಜಿಕ ಬದಲಾವಣೆಗೆ ಪತ್ರಿಕೋದ್ಯಮ ಆಯ್ಕೆ ಕೂಡ ವಿದ್ಯಾರ್ಥಿಗಳಿಗಿದೆ.

ವಿದ್ಯಾರ್ಥಿ ದಿಸೆಯಿಂದಲೇ ತಮ್ಮ ಭವಿಷ್ಯದ ಗುರಿ ಈಡೇರಿಕೆಗೆ ಶ್ರಮ ವಹಿಸಿದಲ್ಲಿ ಮುಂದೆ ಸಾಧಕರಾಗಬಹುದು ಎಂದು ಕಿವಿಮಾತು ಹೇಳಿದರು.ಕುಶಾಲನಗರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದಮೋಹನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿಧೇಯತೆ, ವಿನಯವಂತಿಕೆ ಮೈಗೂಡಿಸಿಕೊಳ್ಳಬೇಕು. ಗುರು ಹಿರಿಯರನ್ನು ಗೌರವಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ದಿನಪತ್ರಿಕೆ ಓದುವ ಹವ್ಯಾಸ ಬೆಳೆಸಿಕೊಂಡು ದಿನನಿತ್ಯದ ಆಗುಹೋಗುಗಳ ಬಗ್ಗೆ ಅರಿವು ಹಾಗೂ ಪ್ರಪಂಚ ಜ್ಞಾನ ವೃದ್ಧಿಸಿಕೊಳ್ಳಲು ಕರೆ ನೀಡಿದರು. ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಕೂಡ ಹೊಂದಬೇಕಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ವಿತರಕ ವಿ.ಪಿ. ಪ್ರಕಾಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಳೆಗಾಲಕ್ಕೆ ಅನುಕೂಲವಾಗುವಂತೆ ರೈನ್ ಕೋಟ್, ಸ್ವೆಟರ್ ವಿತರಿಸಲಾಯಿತು. ಎಸ್.ಎಲ್.ವಿ. ಬುಕ್ ಹೌಸ್ ವತಿಯಿಂದ ಶಾಲೆಯ ನೂರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳು, ಪೆನ್ ಕೊಡುಗೆ ನೀಡಲಾಯಿತು.

ಪತ್ರಿಕಾ ದಿನದ ಅಂಗವಾಗಿ ಒಂದು ವರ್ಷದ ಅವಧಿಗೆ ಶಾಲೆಗೆ ಸಂಘದ ಸದಸ್ಯರ ಮೂಲಕ ಶಕ್ತಿ ಪತ್ರಿಕೆ ಸೇರಿದಂತೆ ವಿವಿಧ ದಿನಪತ್ರಿಕೆ ಒದಗಿಸುವ ಕಾರ್ಯಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಲಾಯಿತು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಆಶಾ, ದಾನಿಗಳಾದ ರಾಮದಾಸ್ ಶೆಟ್ಟಿ, ಶಾಲಾ ಮುಖ್ಯ ಶಿಕ್ಷಕ ಪೆರುಮಾಳ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷೆ ವನಿತಾ ಚಂದ್ರಮೋಹನ್, ತಾಲೂಕು ಸಂಘದ ಖಜಾಂಚಿ ವಿನೋದ್, ನಿರ್ದೇಶಕ ಜಯಪ್ರಕಾಶ್, ಸದಸ್ಯರಾದ ಭೋಜಣ್ಣ ರೆಡ್ಡಿ, ಷಂಶುದ್ದೀನ್ ಸೇರಿದಂತೆ ಶಾಲಾ ಶಿಕ್ಷಕ ವೃಂದದವರು ಇದ್ದರು. ಶಿಕ್ಷಕಿ ತುಳಸಿ ಸ್ವಾಗತಿಸಿದರು. ವನಿತಾ ಚಂದ್ರಮೋಹನ್ ವಂದಿಸಿದರು. ಭೋಜಣ್ಣ ರೆಡ್ಡಿ ಕಾರ್ಯಕ್ರಮ ನಿರೂಪಿಸಿದರು.