ಗೋಣಿಕೊಪ್ಪಲು, ಜು. ೧: ಪೊನ್ನಂಪೇಟೆಯ ಅಪ್ಪಚ್ಚ ಕವಿ ವಿದ್ಯಾಲಯದಲ್ಲಿ ರಾಷ್ಟಿçÃಯ ವೈದ್ಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಉದ್ದೇಶದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ ಡಾ. ಗ್ರೀಷ್ಮ ಬೋಜಮ್ಮ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ. ಗ್ರೀಷ್ಮ ಬೋಜಮ್ಮ, ಶಿಕ್ಷಣದಷ್ಟೇ ಆರೋಗ್ಯಕ್ಕೂ ಮಹತ್ವ ನೀಡಬೇಕು. ವೈಯಕ್ತಿಕ ಸ್ವಚ್ಛತೆ, ನಿಯಮಿತ ಯೋಗಾಭ್ಯಾಸ, ಕ್ರೀಡೆ ಹಾಗೂ ಪೌಷ್ಟಿಕ ಆಹಾರವನ್ನು ಜೀವನಶೈಲಿಯ ಭಾಗವಾಗಿಸಿಕೊಳ್ಳಬೇಕು. ಜಂಕ್ ಫುಡ್‌ನಿಂದ ದೂರವಿದ್ದು, ನೈಸರ್ಗಿಕ ಆಹಾರ ಸೇವಿಸುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಮುಖ್ಯ ಅತಿಥಿಯಾಗಿದ್ದ ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್ ಮಾತನಾಡಿ, ಆರೋಗ್ಯವನ್ನು ನಿರ್ಲಕ್ಷಿಸದೆ ಪೌಷ್ಟಿಕ ಆಹಾರ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಶೀಘ್ರದಲ್ಲೇ ಶಾಲೆಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗುವುದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವೈದ್ಯರ ದಿನಾಚರಣೆಯ ಮಹತ್ವ ಹಾಗೂ ಡಾ. ಬಿ.ಸಿ. ರಾಯ್ ಅವರ ಸೇವೆಯನ್ನು ಸ್ಮರಿಸಿದರು.

ವಿದ್ಯಾಸಂಸ್ಥೆಯ ಅಧ್ಯಕ್ಷ ಪೊನ್ನಿಮಾಡ ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಆರೋಗ್ಯ ಕಾಪಾಡುವಲ್ಲಿ ವೈದ್ಯರ ಸೇವೆ ಅತ್ಯಂತ ಶ್ಲಾಘನೀಯ. ಪೋಷಕರ ಕನಸುಗಳನ್ನು ನನಸಾಗಿಸುವ ಸಂಕಲ್ಪದೊAದಿಗೆ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಆರೋಗ್ಯಕ್ಕೂ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೊಣಿಯಂಡ ಸಂಜು ಸೋಮಯ್ಯ, ಉಪಾಧ್ಯಕ್ಷೆ ಮೂಕಳೇರ ಕಾವ್ಯ ಕಾವೇರಮ್ಮ, ಜಂಟಿ ಕಾರ್ಯದರ್ಶಿ ಕಳ್ಳಿಚಂಡ ದೇವಯ್ಯ, ಇಂಟರ್‌ನಲ್ ಆಡಿಟರ್ ಗುಮ್ಮಟ್ಟಿರ ಗಂಗಮ್ಮ, ಮುಖ್ಯೋಪಾಧ್ಯಾಯಿನಿ ತನುಜ, ಶಿಕ್ಷಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯಿನಿ ತನುಜ ಸ್ವಾಗತಿಸಿದರು. ವಿದ್ಯಾರ್ಥಿನಿ ಎ.ಯು. ಶಿಫ್ನಾ ಕಾರ್ಯಕ್ರಮ ನಿರೂಪಿಸಿದರು. ದಿಶಾ ತಂಡ ಪ್ರಾರ್ಥನೆ ನಡೆಸಿ, ಶಿಕ್ಷಕಿ ಆಶೀದ ವಂದಿಸಿದರು.