ಮಡಿಕೇರಿ, ಜು. ೧: ಹೊರಗಿನ ಉದ್ಯಮ ಸಂಸ್ಥೆಗಳು ಕೊಡಗಿನಲ್ಲಿ ನಿರ್ಮಿಸಿರುವ ಟೌನ್‌ಶಿಪ್ ಮತ್ತು ರೆಸಾರ್ಟ್ಗಳು ಕೊಡವರ ಭವಿಷ್ಯಕ್ಕೆ ಮಾರಕವಾಗಿದ್ದು ಅವುಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಾ. ೧೦ ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ತಿಳಿಸಿದ್ದಾರೆ.

ಮದ್ರಾಸ್ ಹೈಕೋರ್ಟ್ ಆದೇಶಗಳನ್ನು ಪಾಲಿಸಿ, ೨೦೨೪-೨೫ರಲ್ಲಿ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ನೂರಾರು ರೆಸಾರ್ಟ್ಗಳನ್ನು ಒಂದೇ ಹಂತದಲ್ಲಿ ತೆರವುಗೊಳಿಸಿದ ಮಾದರಿಯಲ್ಲಿಯೇ, ಕರ್ನಾಟಕ ಸರಕಾರದಿಂದಲೂ ಕಠಿಣ ಕ್ರಮ ಜಾರಿಯಾಗಬೇಕೆಂದು ಅವರು ಒತ್ತಾಯಿಸಿದ್ದಾರೆ. ಸುಲಭವಾಗಿ ಹಣ ಗಳಿಸುವ ಉದ್ದೇಶಕ್ಕಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸರಕಾರ ತಿದ್ದುಪಡಿಗಳನ್ನು ತಂದಿದೆ. ಇದರ ದುರ್ಲಾಭ ಪಡೆದು ಯಾರು ಬೇಕಾದರೂ ಕೊಡಗಿನಲ್ಲಿ ಭೂಮಿಯನ್ನು ಖರೀದಿಸಬಹುದಾಗಿದೆ. ಸರಕಾರಕ್ಕೆ ಯಾವಾಗ ಹಣದ ಅಗತ್ಯವಿರುತ್ತದೆಯೋ ಅಥವಾ ಅದರ ಬೊಕ್ಕಸದಲ್ಲಿ ಕೊರತೆಯುಂಟಾಗುತ್ತದೆಯೋ, ಆಗ ಅದು ಹೊರಗಿನ ಖರೀದಿದಾರರ ಅನುಕೂಲಕ್ಕಾಗಿ ಭೂಪರಿವರ್ತನೆಗೆ ಅನುಕೂಲ ಮಾಡಿಕೊಡಲು ಮುಂದಾಗುತ್ತದೆ. ಇದು ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಎನ್.ಯು. ನಾಚಪ್ಪ ಆರೋಪಿಸಿದ್ದಾರೆ.