ಕರ್ನಾಟಕದಲ್ಲಿ ‘ಪತ್ರಿಕಾ ದಿನಾಚರಣೆ'ಯನ್ನು ಪ್ರತಿ ವರ್ಷ ಜುಲೈ ೧ ರಂದು ಆಚರಿಸಲಾಗುತ್ತದೆ.

ಕನ್ನಡದ ಮೊಟ್ಟ ಮೊದಲ ಪತ್ರಿಕೆಯಾದ 'ಮಂಗಳೂರು ಸಮಾಚಾರ'ವನ್ನು ೧೮೪೩ರ ಜುಲೈ ೧ ರಂದು ರೆವರೆಂಡ್ ಹರ್ಮನ್ ಮೊಗ್ಲಿಂಗ್ ಅವರು ಆರಂಭಿಸಿದ ದಿನದ ನೆನಪಿಗಾಗಿ ಈ ದಿನವನ್ನು ಪತ್ರಿಕಾ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮೊದಲ ಪತ್ರಿಕೆಯನ್ನು ಓದುಗರು ಪತ್ರಿಕೆ ಎನ್ನಲಾಗದೆ ಕಾಗದ ಎನ್ನುತ್ತಿದ್ದರು. ಕ್ರಯ ೧ ದುಡ್ಡು. ಮಂಗಳೂರು ಸಮಾಚಾರ ತಿಂಗಳಿಗೆ ಎರಡು ಸಲ ಪ್ರಕಟವಾಗುತ್ತಿತ್ತು.

ಸುದ್ದಿ ಯಾರಿಗೆ ಬೇಡ? ಅದು ಒಳ್ಳೆಯ ಸುದ್ದಿಯಾಗಿರಲಿ, ಕೆಟ್ಟ ಸುದ್ದಿಯಾಗಿರಲಿ, ಸುಳ್ಳು ಸುದ್ದಿಯಾಗಿರಲಿ, ವದಂತಿಯಾಗಿರಲಿ, ಎಲ್ಲರಿಗೂ ಸುದ್ದಿ ಬೇಕು. ತಾವೂ ಸುದ್ದಿಯಾಗೋದು ಹಲವರಿಗೆ ಬೇಕು. ಒಟ್ಟಿನಲ್ಲಿ ಈ ಜಗತ್ತಿನ ಯಾವುದಾದರೂ ವಿಚಾರವನ್ನು ಕೇಳುತ್ತಲೇ ಇರಬೇಕು. ತಿಳಿಯುತ್ತಲೇ ಇರಬೇಕು. ಜಗದ ವರ್ತಮಾನ ಬೇಕೇ ಬೇಕು. ಸತ್ಯ ಸುದ್ದಿಗಿಂತ ಸುಳ್ಳು ಸುದ್ದಿ ಕೇಳಲು ಮನಸ್ಸು ಆಸಕ್ತಿ ತೋರುತ್ತದೆ. ಸತ್ಯ ಸುದ್ದಿಗಿಂತ ಸುಳ್ಳು ಸುದ್ದಿ ಬಹಳ ಬೇಗ ಪಸರಿಸುವ ಕಾಲದಲ್ಲಿ ನಾವಿದ್ದೇವೆ.

ನಾಗರಿಕ ಪ್ರಪಂಚದಲ್ಲಿ ವೃತ್ತ ಪತ್ರಿಕೆಗಳಿಗೆ ವಿಶೇಷ ಸ್ಥಾನವಿದೆ. ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಗಂತೂ ಪತ್ರಕರ್ತರ ಕೊಡುಗೆ ಸಾಮಾನ್ಯವಾದದ್ದೇನಲ್ಲ. ಕನ್ನಡದಲ್ಲಿ ಪತ್ರಿಕೋದ್ಯಮ ಪ್ರಾರಂಭವಾದುದು ಕಳೆದ ಶತಮಾನದ ಉತ್ತರಾರ್ಧದಲ್ಲಿ. ಪಾಶ್ಚಾತ್ಯರ ಸಂಪರ್ಕವಾದ ಮೇಲೆ ಅವರು ಮುದ್ರಣ ಯಂತ್ರಗಳನ್ನು ಕರ್ನಾಟಕದಲ್ಲೂ ಬಳಕೆಗೆ ತಂದರು. ನಂತರ ಅವರಿಂದಲೇ ಪತ್ರಿಕೆಗಳು ಪ್ರಾರಂಭವಾದವು. ಕ್ರೆöÊಸ್ತ ಪಾದ್ರಿಗಳ ಪ್ರಯತ್ನದಿಂದ ಅವರು ಆ ಕೆಲಸವನ್ನು ತಮ್ಮ ಮತ ಪ್ರಚಾರ ಕಾರ್ಯಕ್ಕಾಗಿ ಪ್ರಾರಂಭ ಮಾಡಿದರು.

ಮಂಗಳೂರು ಸಮಾಚಾರ ಪತ್ರಿಕೆಯನ್ನು ಸ್ವಿಟ್ಜರ್‌ಲ್ಯಾಡಿನ ಇವಾಂಜಲಿಕಲ್ ಸೊಸೈಟಿಯ ರೆವರೆಂಡ್ ಮಾಗ್‌ಲಿಂಗ್ ಅವರು ಮುದ್ರಿಸುತ್ತಿದ್ದರು. ಪ್ರತಿ ತಿಂಗಳು ೧ ನೇ ಮತ್ತು ೧೫ ನೇ ತಾರೀಕುಗಳಲ್ಲಿ ಪ್ರಕಟವಾಗುತ್ತಿತ್ತು. ಸ್ವಲ್ಪ ಕಾಲದಲ್ಲಿಯೇ ಬಳ್ಳಾರಿಗೆ ವರ್ಗವಾಗಿ 'ಕನ್ನಡ ಸಮಾಚಾರ' ಎಂಬ ಹೊಸ ಹೆಸರನ್ನು ಇದು ತಾಳಿತು. ೧೮೪೪ ರ ಮಾರ್ಚ್ ೧ ರಿಂದ ಬಳ್ಳಾರಿಯಿಂದ ಪ್ರಕಟವಾಗಲು ಪ್ರಾರಂಭವಾಯಿತು. ಇದರ ಬೆಲೆ ಒಂದು ದುಡ್ಡಾಗಿತ್ತು.! ಕೆಲವು ಕಾಲಗಳಾದ ನಂತರ ಇದರ ಬೆಲೆ ಎರಡು ದುಡ್ದಿಗೂ ಏರಿತು. ಅಲ್ಪಕಾಲದಲ್ಲಿಯೇ ಮಂಗಳೂರಿಗೆ ವರ್ಗವಾಗಿ ‘ಕನ್ನಡ ಸುವಾರ್ತಿಕ', ‘ಕರ್ನಾಟಕ ಪತ್ರಿಕೆ', ‘ಬಾಲಪತ್ರ', ‘ಸತ್ಯದೀಪಿಕೆ', ‘ಕ್ರಿಸ್ತಸ ಭಾಪತ್ರ', ಎಂಬ ಬೇರೆ ಬೇರೆ ಹೆಸರುಗಳಿಂದ ೧೯೪೦ ರವರೆಗೆ ಬೆಳೆಯಿತು.

೧೮೪೩ರ ಜುಲೈ ೧ ರಂದು ‘ಮಂಗಳೂರು ಸಮಾಚಾರ‘ ಆರಂಭಗೊಳ್ಳುವ ಮೂಲಕ ಕನ್ನಡ ಪತ್ರಿಕೋದ್ಯಮದ ಚರಿತ್ರೆಯೂ ಆರಂಭಗೊAಡಿತು. ಕನ್ನಡ ಭಾಷೆ ಇದರಲ್ಲಿ ಬಳಕೆಯಾಗಿದ್ದ ಕಾರಣ ಕನ್ನಡದ ಮೊದಲ ಪತ್ರಿಕೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಯಿತು. ೧೮೪೩ರಲ್ಲಿ ಬಾಸೆಲ್ ಮಿಶನ್ ಪ್ರೆಸ್- ಕಲ್ಲಚ್ಚಿನ ಮುದ್ರಣಾಲಯ ಸ್ಥಾಪಿಸಿ ಕನ್ನಡದಲ್ಲಿ ಮುದ್ರಣ ಕಾರ್ಯ ಪ್ರಾರಂಭಿಸಿತು. ಕ್ರೆöÊಸ್ತ ಮಿಷನರಿಗಳ ಬೋಧನಾ ಶಿಬಿರಗಳಲ್ಲಿ ಅಧ್ಯಾಪಕರಾಗಿದ್ದ ರೆವರೆಂಡ್ ಹರ್ಮನ್ ಮೋಗ್ಲಿಂಗ್ ‘ಮಂಗಳೂರು ಸಮಾಚಾರ’ ಪತ್ರಿಕೆಯ ಮೊದಲ ಸಂಪಾದಕರಾಗಿದ್ದರು.

ಮೋಗ್ಲಿAಗ್‌ರನ್ನು ಕನ್ನಡ ಪತ್ರಿಕೋದ್ಯಮದ ಮೂಲಪುರುಷ, ಪಿತಾಮಹ ಎಂದು ಕರೆಯಲಾಗುತ್ತದೆ. ಅವರು ೧೮೩೬ ರಿಂದ ೧೮೬೦ ರವರೆಗೆ ಭಾರತದಲ್ಲಿದ್ದರು, ಕಾಲ್ನಡಿಗೆಯಲ್ಲಿ ಕರ್ನಾಟಕದುದ್ದಕ್ಕೂ ಸಂಚರಿಸಿದ್ದರು. ಅವರಿಗೆ ಕನ್ನಡ, ಸಂಸ್ಕೃತ, ಗ್ರೀಕ್, ಜರ್ಮನ್ ಭಾಷಾ ಜ್ಞಾನವಿತ್ತು. ಹರ್ಮನ್ ಮೋಗ್ಲಿಂಗ್ ಕನ್ನಡದಲ್ಲಿದ್ದ ದಾಸರ ಪದಗಳನ್ನು ಜರ್ಮನ್ ಭಾಷೆಗೆ ಅನುವಾದಿಸಿದ್ದರು ಎಂಬುದನ್ನು ಚರಿತ್ರೆ ಹೇಳುತ್ತದೆ, ಪಾಶ್ಚಾತ್ಯ ಪ್ರಪಂಚದಲ್ಲಿ ಜನಜೀವನದ ಮೇಲೆ ಮುದ್ರಣದ ಪ್ರಭಾವವು ಮೂರು ನಾಲ್ಕು ಶತಮಾನಗಳಿಂದ ಉಂಟಾಗಿದ್ದರೂ ನಮ್ಮಲ್ಲಿ ಈ ವ್ಯವಸ್ಥೆ ಒಂದೂವರೆ ಶತಮಾನದ ಈಚಿನದು. ಕನ್ನಡದ ೨ನೇ ಪತ್ರಿಕೆಯಾದ ಕನ್ನಡ ಸಮಾಚಾರ (೧೮೪೪ ಜೂನ್-೧೮೪೪ ನವೆಂಬರ್) ಪ್ರಾರಂಭವಾದಾಗ ಪತ್ರಿಕೆಯಲ್ಲಿ ಈ ರೀತಿ ಬರೆದಿದ್ದಾರೆ. ಈ ದೇಶಸ್ಥರಲ್ಲಿ ಅನೇಕರಿಗೆ ಕನ್ನಡ ಭಾಷೆೆಯಲ್ಲಿ ಬರೆದ ಸಮಾಚಾರವನ್ನು ಓದುವುದರಲ್ಲಿ ಸಮ್ಮತಿ ಆಗುವುದೆಂದು ನೋಡಿ ಸಂತೋಷದಿAದ ಅದನ್ನು ವೃದ್ದಿಮಾಡುವ ಪ್ರಯತ್ನದಿಂದ ಇನ್ನು ಮುಂದೆ ಕಲ್ಲಿನಲ್ಲಿ ಛಾಪಿಸದೆ ಬಳ್ಳಾರಿಯಲ್ಲಿರುವ ಅಕ್ಷರ ಛಾಪಖಾನೆಯಲ್ಲಿ ಅಚ್ಚುಪಡಿ ಮಾಡಲಿಕ್ಕೆ ನಿಶ್ಚಯಿಸಿದ್ದೇವೆ. ಆದ್ದರಿಂದ ಮೊದಲಿನ ಎರಡು ಪಟ್ಟು ಬರಹ ಪಡಿಯುವುದರಿಂದ ಹೆಚ್ಚು ವರ್ತಮಾನವನ್ನು ಚರಿತ್ರೆಗಳನ್ನು ವಿದ್ಯಾಪಾಠಗಳನ್ನೂ ಬುದ್ಧಿಮಾತುಗಳನ್ನು ಬರಿಯುವುದಕ್ಕೆ ಸ್ಥಳ ಸಿಕ್ಕುವುದು.

೧೮೩ ವರ್ಷಗಳ ಹಿಂದೆ ‘ಮಂಗಳೂರು ಸಮಾಚಾರ’ ಪತ್ರಿಕೆಯೊಂದಿಗೆ ಆರಂಭವಾದ ಕನ್ನಡ ಪತ್ರಿಕಾರಂಗ ಇಂದು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಮುದ್ರಣ ಮಾಧ್ಯಮದಿಂದ ಆರಂಭವಾಗಿ ರೇಡಿಯೋ, ವಿಷುಯಲ್, ಡಿಜಿಟಲ್, ಸೋಷಿಯಲ್ ಮೀಡಿಯಾಗಳವರೆಗೆ ಬೆಳೆದು ನಿಂತಿದೆ. ಕಲ್ಲಚ್ಚಿನ ಕಾಲದ ಪತ್ರಿಕೋದ್ಯಮ ಇಂದಿನ ಆಧುನಿಕ ತಂತ್ರಜ್ಞಾನದೊAದಿಗೆ ಬೆಸೆದುಕೊಂಡಿದೆ. ಪ್ರಪಂಚದ ಯಾವುದೇ ಜಾಗದಲ್ಲಿ ಕೂತು, ಬೆರಳತುದಿಯ ಸ್ಪರ್ಶಕ್ಕೆ ತೆರೆದುಕೊಳ್ಳುವ, ಓದುವ, ಹಂಚುವ ಸಂಪರ್ಕ ಜಾಲವೇ ಸೃಷ್ಟಿಯಾಗಿದೆ ಇದು ನಿಜಕ್ಕೂ, ಇಂದಿನ ಮಾಧ್ಯಮ ಲೋಕದ ತಂತ್ರಜ್ಞಾನದ ವೇಗ ಬೆರಗು ಮೂಡಿಸುವಂತಿದೆ.

ಆದರೆ ಬದಲಾದ ಕಾಲಮಾನಕ್ಕೆ ತಕ್ಕಂತೆ ಪತ್ರಿಕೋದ್ಯಮವೂ ಬದಲಾಗಿದೆ. ಮೌಲ್ಯ, ತತ್ವ-ಸಿದ್ಧಾಂತ, ನ್ಯಾಯ-ನಿಷ್ಠುರತೆ, ಬದ್ಧತೆ, ನೈತಿಕತೆ, ವಸ್ತುನಿಷ್ಠತೆ, ಉತ್ತರದಾಯಿತ್ವ - ಕಾಲ ಸರಿದಂತೆ ಹಲವು ಈ ಕ್ಷೇತ್ರದ ಉದ್ಯಮಿಗಳು ಬದಲಾಗಿದ್ದಾರೆ. ಸುಳ್ಳು ಸುದ್ದಿ ಸೃಷ್ಟಿ, ಬ್ಲ್ಯಾಕ್‌ಮೇಲ್, ಅವಕಾಶವಾದಿತನ, ಮಾರುಕಟ್ಟೆಯಲ್ಲಿ ಮೇಲುಗೈ ಸಾಧಿಸುತ್ತಿರುವುದು ವಿಷಾದ ತರುವಂತಿದೆ. ಸೋಶಿಯಲ್ ಮೀಡಿಯಾ ಹೆಸರಿನಲ್ಲಿ ಎಲ್ಲರೂ ಪತ್ರಕರ್ತರಾಗುವ ಧಾವಂತದಲ್ಲಿದ್ದಾರೆ. ರೀಲ್ಸ್ ಮಾಡುವವರೂ ಪತ್ರಕರ್ತರಿಗೆ ತಾವೇನು ಕಮ್ಮಿಯಿಲ್ಲ ಎಂಬAತೆ ಸಮಾಜದ ಮುಂದೆ ತಾವೇ ನಿಜವಾದ ಸುದ್ದಿ ಸೃಷ್ಟಿಕರ್ತರು ಎಂಬAತೆ ಪೋಸ್ ಕೊಡುವಂತಾಗಿದೆ.

೨೦೦೦ ರ ನಂತರ ಅಂತರ್ಜಾಲ ಅಡಿಯಿಟ್ಟ ಮೇಲೆ ಪತ್ರಿಕೋದ್ಯಮಕ್ಕೆ ದೇಶದ ಉದ್ಯಮರಂಗದ ದಿಗ್ಗಜರು, ಕಾರ್ಪೊರೇಟ್ ಕುಳಗಳ ಆಗಮನವಾದ ಮೇಲೆ ಕೆಲವಾರು ಪತ್ರಿಕೆಗಳಲ್ಲಿ ಸುದ್ದಿ ಕೂಡ ಬಿಕರಿಯಾಗುತ್ತಿದೆ.

ಇಂತಹ ಸ್ಥಿತಿಯಲ್ಲಿ ಪತ್ರಿಕೋದ್ಯಮವೆನ್ನುವುದು ಪ್ರಜಾಪ್ರಭುತ್ವದ ನಾಲ್ಕನೇ ಅಂಗ; ಪತ್ರಿಕೆಗಳು/ಸುದ್ದಿವಾಹಿನಿಗಳು/ವೆಬ್ ತಾಣಗಳು ವಿಶ್ವಾಸಾರ್ಹತೆ ಉಳಿಸಿಕೊಳ್ಳಬೇಕು; ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು; ಪತ್ರಕರ್ತ ಸಮಾಜಮುಖಿಯಾಗಿರಬೇಕು- ಎಂಬ ಜನರ ಆಶಯದ ಧ್ವನಿ ಹೆಚ್ಚು ಕೇಳುತ್ತಿದೆ. ಪತ್ರಿಕೋದ್ಯಮ ಹಾಳಾಗಿದೆ; ಪತ್ರಿಕಾ ಮೌಲ್ಯಗಳು ಯುವಪೀಳಿಗೆಯಲ್ಲಿ ಕಂಡುಬರುತ್ತಿಲ್ಲ ಎಂಬೆಲ್ಲಾ ಆರೋಪಗಳ ನಡುವೇ ಶಿಸ್ತು, ಶ್ರದ್ಧೆ, ಸಂಯಮದಿAದ ಕೆಲಸ ಮಾಡುವ ಪತ್ರಕರ್ತರು ಈಗಲೂ ಇದ್ದಾರೆ. ಜನಪರ, ಜೀವಪರವಾಗಿ ಯೋಚಿಸುವ; ತಮ್ಮ ಇತಿಮಿತಿಯಲ್ಲಿಯೇ ಆಳುವ ಸರ್ಕಾರವನ್ನು ಪ್ರಶ್ನಿಸುವ ಪತ್ರಕರ್ತರೂ ಇದ್ದಾರೆ. ತಾವು ನಂಬಿದ ತತ್ವ-ಸಿದ್ಧಾಂತಗಳನ್ನು ಬಲಿಕೊಡದೆ ವೃತ್ತಿಗೆ ಬದ್ಧರಾದವರು ಇನ್ನೂ ಇದ್ದಾರೆ. ಅವರಿಂದಲೇ ಪತ್ರಿಕೋದ್ಯಮ ಜೀವಂತವಾಗಿದೆ. ಜನರಿಟ್ಟ ನಂಬಿಕೆ, ವಿಶ್ವಾಸ ಬತ್ತದೆ ಬೆಳೆಯುತ್ತಿದೆ. ಯಾಕೆಂದರೆ, ಯಾವುದೇ ಕ್ಷೇತ್ರವಾಗರಲಿ.. ಒಳಿತು ಉಳಿಯುತ್ತದೆ.. ಸದಾ.. ಇಂತಹ ಒಳಿತಿಗೆ ಮೂಲ ಕಾರಣರಾಗಿರುವ ಎಲ್ಲಾ ಓದುಗರಿಗೆ ಪತ್ರಿಕಾ ದಿನಾಚರಣೆಯ ಶುಭಾಷಯಗಳು. ಕನ್ನಡ ಪತ್ರಿಕೆಗಳಿಗೆ ನಿಮ್ಮ ಪ್ರೋತ್ಸಾಹ, ಬೆಂಬಲ ಸದಾ ಇರಲಿ. ಮಕ್ಕಳಲ್ಲಿ ಪತ್ರಿಕೆ ಓದುವ ಪರಿಪಾಟಕ್ಕೆ ನೀವು ಬೆಂಬಲ ನೀಡಿ, ಪತ್ರಿಕೆ ಓದುವಿಕೆ ದಿನನಿತ್ಯದ ಸಂಪ್ರದಾಯದAತಾಗಲಿ. ಪತ್ರಿಕೆ, ಪುಸ್ತಕಗಳ ಓದುವಿಕೆ ನಮ್ಮೆಲ್ಲರ ಹೆಮ್ಮಯ ಸಂಸ್ಕೃತಿಯಾಗಲಿ.

- ಅನಿಲ್ ಎಚ್.ಟಿ.

ಅಧ್ಯಕ್ಷರು, ಕೊಡಗು ಪತ್ರಕರ್ತರ ಸಂಘ