ಸೋಮವಾರಪೇಟೆ, ಜೂ. ೨೯: ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ನಿಗದಿಯಾಗಿದ್ದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಬಗ್ಗೆ ಕೆಡಿಪಿ ಸದಸ್ಯರುಗಳಿಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ ಸದಸ್ಯರುಗಳು, ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಘಟನೆ ನಡೆಯಿತು.

ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಭೆಯ ಆರಂಭದಲ್ಲಿಯೇ ಅಧಿಕಾರಿಗಳ ಕ್ರಮದ ವಿರುದ್ಧ ಸದಸ್ಯರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಪಂಚಾಯಿತಿ ಕೆಡಿಪಿ ಸಮಿತಿಯ ಸದಸ್ಯರಿಗೆ ಮಾಹಿತಿ ನೀಡದೇ ಸಭೆ ಕರೆಯಲಾಗಿದೆ. ಹಿಂದಿನ ಸಭೆಯ ನಡಾವಳಿಯ ಬಗ್ಗೆಯೂ ಸಮರ್ಪಕವಾದ ಮಾಹಿತಿ ಇಲ್ಲ ಎಂದು ಸದಸ್ಯರುಗಳಾದ ಔರಂಗಜೇಬ್, ಆದಂ, ಸಬಿತಾ ಚನ್ನಕೇಶವ, ಜಗದೀಶ್, ವೇದಮೂರ್ತಿ ಅವರುಗಳು ಆಕ್ಷೇಪ ವ್ಯಕ್ತಪಡಿಸಿದರು.

ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಮಾತನಾಡಿ, ಎಲ್ಲಾ ಸದಸ್ಯರುಗಳಿಗೂ ಅಂಚೆ ಮೂಲಕ ಸಭಾ ಸೂಚನಾ ಪತ್ರ ಕಳುಹಿಸಲಾಗಿದೆ ಎಂದರು. ಸದಸ್ಯ ಶರತ್‌ಶೇಖರ್ ಅವರನ್ನು ಬಿಟ್ಟು ಉಳಿದ ಯಾವ ಸದಸ್ಯರಿಗೂ ಮಾಹಿತಿ ಲಭಿಸಿಲ್ಲ. ಅದೂ ಅಲ್ಲದೇ ಕಳೆದ ಸಾಲಿನ ಕೆಡಿಪಿ ಸಭೆಯ ನಡಾವಳಿ, ಅನುಪಾಲನಾ ವರದಿಯನ್ನೂ ನೀಡಿಲ್ಲ. ಚರ್ಚೆಯಾದ ವಿಷಯಗಳ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನೂ ಕೊಟ್ಟಿಲ್ಲ. ಕೆಡಿಪಿ ಸಭೆಯನ್ನು ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿಲ್ಲ. ಈ ಹಿನ್ನೆಲೆ ಶೋಕಾಸ್ ನೋಟೀಸ್ ನೀಡುವಂತೆ ಸದಸ್ಯರುಗಳು ಆಗ್ರಹಿಸಿದರು.

ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಕಳೆದ ಸಾಲಿನಲ್ಲಿ ಚರ್ಚೆಯಾದ ವಿಷಯಗಳು, ಕೈಗೊಂಡ ಕ್ರಮಗಳ ಬಗ್ಗೆ ಸದಸ್ಯರಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಅನುಪಾಲನಾ ವರದಿ ಕೊಡಬೇಕು ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಪರಮೇಶ್‌ಕುಮಾರ್ ಅವರಿಗೆ ತಾಕೀತು ಮಾಡಿದರು.

ಅರಣ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ನಿಗದಿತ ಅವಧಿಯೊಳಗೆ ಅನುಪಾಲನಾ ವರದಿ ನೀಡಿಲ್ಲ. ಹೀಗಾಗಿ ಕೆಡಿಪಿ ಸಭೆಯ ಅನುಪಾಲನಾ ವರದಿಯಲ್ಲಿ ನಮೂದಿಸಲು ಸಾಧ್ಯವಾಗಿಲ್ಲ ಎಂದು ಕಾರ್ಯನಿರ್ವಹಣಾಧಿಕಾರಿ ಹೇಳಿದರು.

ಎಲ್ಲ ಸದಸ್ಯರುಗಳಿಗೂ ಹಿಂದಿನ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರಗಳು ಲಭಿಸಿಲ್ಲ. ಬೇಜವಾಬ್ದಾರಿ ತೋರುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಇಂದಿನ ಕೆಡಿಪಿ ಸಭೆಯನ್ನು ಮುಂದೂಡಬೇಕೆAದು ಸದಸ್ಯರುಗಳು ಶಾಸಕರಲ್ಲಿ ಮನವಿ ಮಾಡಿದರು. ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಇಂದಿನ ಕೆಡಿಪಿ ಸಭೆಯನ್ನು ರದ್ದುಗೊಳಿಸಿದ ಶಾಸಕರು, ಮುಂದಿನ ವಾರದಲ್ಲಿ ಮತ್ತೊಮ್ಮೆ ಕೆಡಿಪಿ ಸಭೆ ನಿಗದಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ನಡಾವಳಿಯನ್ನು ಸಮರ್ಪಕವಾಗಿ ನಮೂದು ಮಾಡಬೇಕು. ಕೆಡಿಪಿ ಸಭೆಯನ್ನು ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷö್ಯ ತೋರಿದರೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಕೆ ನೀಡಿದರು.

ನಂತರ ಅನೌಪಚಾರಿಕವಾಗಿ ಕೆಲವೊಂದು ಇಲಾಖೆಗಳ ಬಗ್ಗೆ ಚರ್ಚೆ ನಡೆಯಿತು. ಶನಿವಾರಸಂತೆ ಪ್ರವಾಸಿ ಮಂದಿರದ ಬಳಿಯಿರುವ ನೀಲಗಿರಿ ಮರ ತೆರವಿಗೆ ಕಳೆದ ಸಭೆಯಲ್ಲಿ ಹೇಳಿದ್ದರೂ ಮರ ತೆರವುಗೊಳಿಸಿಲ್ಲ. ಗ್ರಾಮೀಣ ಭಾಗದ ರಸ್ತೆ ಮಧ್ಯಭಾಗದಲ್ಲಿರುವ ಮರಗಳನ್ನು ತೆರವುಗೊಳಿಸುತ್ತಿಲ್ಲ. ಶಾಸಕರು ಅನುದಾನ ತಂದರೂ ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅರಣ್ಯ ಇಲಾಖೆ ಅಡ್ಡಿಯಾಗುತ್ತಿದೆ ಎಂದು ಸದಸ್ಯ ಔರಂಗಜೇಬ್ ಹೇಳಿದರು.

ಅರಣ್ಯ ಇಲಾಖೆ ಸಾರ್ವಜನಿಕರಿಗೆ ತೊಂದರೆ ಕೊಡಬಾರದು. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಬಾರದು ಎಂದು ನಿರ್ದೇಶಿಸಿದ ಶಾಸಕ ಡಾ. ಮಂತರ್ ಗೌಡ, ಕಾಜೂರು ಅರಣ್ಯದಲ್ಲಿ ತೇಗ ಕಳ್ಳತನ ಮಾಡಿದ ಪ್ರಕರಣದ ತನಿಖೆ ಎಲ್ಲಿಗೆ ಬಂದಿದೆ ಎಂದು ಪ್ರಶ್ನಿಸಿದರು.

ರೈತರು, ಸಾರ್ವಜನಿಕ ಉದ್ದೇಶಕ್ಕೆ ಮರ ತೆರವಿಗಾಗಿ ಅರ್ಜಿ ಸಲ್ಲಿಸಿದರೆ ವೃಥಾ ಅಲೆದಾಡಿಸುತ್ತೀರಿ. ಇದರಿಂದಾಗಿ ಅಭಿವೃದ್ಧಿ ಕಾರ್ಯಗಳಿಗೂ ಹಿನ್ನಡೆಯಾಗುತ್ತದೆ. ಅರಣ್ಯ ಇಲಾಖೆ ಒಟ್ಟಾರೆಯಾಗಿ ಸಾರ್ವಜನಿಕ ಸ್ನೇಹಿಯಾಗಿ ಕೆಲಸ ಮಾಡುತ್ತಿಲ್ಲ. ಈ ಧೋರಣೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಶನಿವಾರಸಂತೆ ಆರ್‌ಎಫ್‌ಓ ಅವರಿಗೆ ಎಚ್ಚರಿಕೆ ನೀಡಿದರು.

ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಭಾಗದಲ್ಲಿ ಹಕ್ಕುಪತ್ರಕ್ಕೆ ಅರ್ಜಿ ಸಲ್ಲಿಸಿರುವ ಬಡ ಮಂದಿಯಿAದ ಕೆಲ ಬ್ರೋಕರ್‌ಗಳು ಹಣ ವಸೂಲಾತಿ ಮಾಡುತ್ತಿದ್ದಾರೆ. ಹಕ್ಕುಪತ್ರ ಕೊಡಿಸುವುದಾಗಿ ಸಾವಿರಾರು ರೂಪಾಯಿ ಪಡೆದಿರುವ ಮಾಹಿತಿಯಿದೆ. ತಕ್ಷಣ ತಹಶೀಲ್ದಾರ್‌ರು ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವ ಫಲಾನುಭವಿಗಳ ಸಭೆ ಕರೆದು, ವಸ್ತು ಸ್ಥಿತಿಯ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ಔರಂಗಜೇಬ್ ಹೇಳಿದರು.

ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿರುವ ಯಾರೂ ಸಹ ಬ್ರೋಕರ್‌ಗಳಿಗೆ ಹಣ ನೀಡಬಾರದು. ಯಾರಾದರೂ ಹಣಕ್ಕೆ ಬೇಡಿಕೆಯಿಟ್ಟರೆ ತಮ್ಮ ಗಮನಕ್ಕೆ ತರಬೇಕೆಂದು ಶಾಸಕರು ತಿಳಿಸಿದರು.

ಕಳೆದ ಸಭೆಯಲ್ಲಿ ಗ್ರಾಮೀಣ ಪ್ರದೇಶದ ಅಂಗನವಾಡಿಗಳಿಗೆ ಭೇಟಿ ನೀಡುವಂತೆ ಅಧಿಕಾರಿಗೆ ಸೂಚನೆ ನೀಡಲಾಗಿತ್ತು. ಸ್ಥಳೀಯ ಸದಸ್ಯರಿಗೆ ಮಾಹಿತಿ ನೀಡುವಂತೆ ತಿಳಿಸಲಾಗಿತ್ತು. ಆದರೆ ಈವರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಂಗನವಾಡಿಗಳಿಗೆ ಭೇಟಿ ನೀಡಿಲ್ಲ. ಕರೆ ಮಾಡಿದರೆ ಇಲ್ಲಸಲ್ಲದ ಸಬೂಬು ನೀಡುತ್ತಿದ್ದಾರೆ ಎಂದು ಸದಸ್ಯರುಗಳು ಆರೋಪಿಸಿದರು.

ಕಳೆದ ಕೆಡಿಪಿ ಸಭೆಯಿಂದ ಈವರೆಗೆ ಪಟ್ಟಣ ಪಂಚಾಯಿತಿಯಿAದ ಕೈಗೊಂಡ ಕ್ರಮಗಳ ಸಂಪೂರ್ಣ ಅನುಪಾಲನಾ ವರದಿ ನೀಡಬೇಕೆಂದು ಶಾಸಕರು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು. ಮುಂದಿನ ವಾರದಲ್ಲಿ ದಿನಾಂಕ ನಿಗದಿಪಡಿಸಿ ಮತ್ತೊಮ್ಮೆ ಕೆಡಿಪಿ ಸಭೆ ಆಯೋಜಿಸುವಂತೆ ಡಾ. ಮಂತರ್ ಗೌಡ ಅವರು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಡಳಿತಾಧಿಕಾರಿ ಅಬ್ದುಲ್ ನಬಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಜ.ಎಂ. ಕಾಂತರಾಜ್ ಅವರುಗಳು ವೇದಿಕೆಯಲ್ಲಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಭೆಗೆ ಆಗಮಿಸಿದ್ದರು.