ಮಡಿಕೇರಿ, ಜೂ. ೨೯: ನಗರದಲ್ಲಿ ನಾಯಿಗಳ ಹಾವಳಿ ತೀವ್ರವಾಗಿದ್ದು ನಗರಸಭೆ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಆಗ್ರಹಿಸಿದ್ದಾರೆ. ಶಾಲಾ ಮಕ್ಕಳು ರಸ್ತೆಯಲ್ಲಿ ನಡೆದುಹೋಗದಂತಾ ಪರಿಸ್ಥಿತಿ ನಿರ್ಮಾಣವಾಗಿದೆ, ಹಿರಿಯ ನಾಗರಿಕರು ಬೆಳಗಿನ ವಾಯುವಿಹಾರಕ್ಕೆ ತೆರಳಲು ಹಿಂದೇಟು ಹಾಕುವಂತಹ ಪರಿಸ್ಥಿತಿ ನಗರದಲ್ಲಿ ಉದ್ಭವವಾಗಿದ್ದು ನಗರಸಭೆ ಈ ಬಗ್ಗೆ ವಿಳಂಬ ನೀತಿ ಅನುಸರಿಸಿರುವ ಬಗ್ಗೆ ಸುನಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ನ ಆದೇಶದಲ್ಲಿ ಬೀದಿ ನಾಯಿಗಳನ್ನು ಸ್ಥಳಾಂತರಿಸಬೇಕೆAದು ಸ್ಪಷ್ಟ ಉಲ್ಲೇಖವಿದ್ದರೂ ನಗರಸಭೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ, ಆಡಳಿತ ನಡೆಸುವವರು ಮತ್ತು ಸಂಬAಧಿತ ಅಧಿಕಾರಿಗಳು ಜನರ ಹಿತದೃಷ್ಟಿಯನ್ನು ಗಮನದಲ್ಲಿರಿಸಿಕೊಂಡು ಕೂಡಲೇ ಈ ಬಗ್ಗೆ ಕಾರ್ಯನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಯಾರದೇ ಜೀವಕ್ಕೆ ಅಪಾಯ ಉಂಟಾಗಿ ಅನಾಹುತ ಆಗುವ ಮೊದಲು ಸಂಬAಧಿಸಿದವರ ಗಮನ ಅಗತ್ಯ ಎಂದು ಅವರು ಆಶಿಸಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿಗಳು ನಗರಸಭೆಗೆ ಸೂಕ್ತ ನಿರ್ದೇಶನ ನೀಡುವಂತೆ ಸುನಿಲ್ ಒತ್ತಾಯಿಸಿದ್ದಾರೆ.