ಚೆಯ್ಯಂಡಾಣೆ, ಜೂ. ೨೯: ಸಮುದಾಯದ ಜನರು ಧಾರ್ಮಿಕ ಚೌಕಟ್ಟಿನೊಳಗೆ ಸಮಾಜಮುಖಿ ಕೆಲಸಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಕರ್ನಾಟಕ ಸರ್ಕಾರದ ಕನಿಷ್ಟ ವೇತನ ಸಲಹಾ ಸಮಿತಿಯ ಅಧ್ಯಕ್ಷ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹೀದ್ ತೆಕ್ಕಿಲ್ ಹೇಳಿದರು.
ಕಡಂಗದ ಬದ್ರಿಯಾ ಮಸೀದಿ ಸಮೀಪ ಆಯೋಜಿಸಿದ್ದ ಅಸ್ಮಾಹುಲ್ ಹುಸ್ನಾ ಮಜ್ಲಿಸ್ ಹಾಗೂ ಸ್ವಲಾತ್ ಸಮರ್ಪಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಸಮಸ್ಯೆಗಳನ್ನು ಎದುರಿಸುವಲ್ಲಿ ವಿಶ್ವಾಸ ಹಾಗೂ ದೃಢಸಂಕಲ್ಪವು ದೊಡ್ಡ ಪ್ರೇರಣೆಯಾಗುತ್ತದೆ. ಸಮುದಾಯದ ಯುವಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸಂತಸದ ಸಂಗತಿ. ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಸಮುದಾಯದ ಯುವಕರು ಉನ್ನತ ಹುದ್ದೆಗಳನ್ನು ಅಲಂಕರಿಸಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದಾಗ ಮಾತ್ರ ಸಮುದಾಯಕ್ಕೆ ಹೆಚ್ಚಿನ ಗೌರವ ಮತ್ತು ಗುರುತಿನ ಸ್ಥಾನ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇಸ್ಲಾಮ್‌ನ ಆಚಾರ-ವಿಚಾರ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಿ ಬೆಳೆಸುವಂತೆ ಕರೆ ನೀಡಿದರು.
ಕಾರ್ಯಕ್ರಮವನ್ನು ಬದ್ರಿಯಾ ಮಸೀದಿಯ ಮುದರ್ರಿಸ್ ಮೊಹಮ್ಮದ್ ಸ್ವಾದಿಕ್ ಸಖಾಫಿ ಸುರೈಜಿ ಉದ್ಘಾಟಿಸಿದರು. ಮೊಯ್ಯದ್ದೀನ್ ಜುಮಾ ಮಸೀದಿಯ ಖತೀಬ್ ಇರ್ಷಾದ್ ಇರ್ಫಾನಿ ಕೊಲ್ಲಂ ಪ್ರಾಸ್ತಾವಿಕವಾಗಿ ಮಾತನಾಡಿದರು. ರಹೀಂ ಅಹ್ಸನಿ ತಾನಹೂರ್ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಟಿ.ಎಂ. ಶಾಹೀದ್ ತೆಕ್ಕಿಲ್ ಅವರನ್ನು ಮೊಯ್ಯದ್ದೀನ್ ಉಸ್ತಾದರ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಸ್ಮಾಹುಲ್ ಹುಸ್ನಾ ಅಧ್ಯಾತ್ಮಿಕ ಮಜ್ಲಿಸ್‌ಗೆ ಮೊಯ್ಯದ್ದೀನ್ ಮುಸ್ಲಿಯಾರ್ ಕಡಂಗ ನೇತೃತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬದ್ರಿಯಾ ಮಸೀದಿಯ ಅಧ್ಯಕ್ಷ ಉಸ್ಮಾನ್ ಹಾಜಿ, ಮೊಯ್ಯದ್ದೀನ್ ಮಸೀದಿಯ ಅಧ್ಯಕ್ಷ ಕುಂಞ ಅಬ್ದುಲ್ಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ, ಮಾಜಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಸುಬೈರ್, ಫತಾಯಿ, ಶಾಫಿ ಎಡಪಾಲ, ಷಹಜಹಾನ್ ಸಖಾಫಿ, ಹನೀಫ್ ಸಖಾಫಿ, ಅಝೀಝ್ ಸಖಾಫಿ ಕೊಂಡAಗೇರಿ, ಕೊಂಡAಗೇರಿ ಮುದರ್ರಿಸ್ ಮೊಯಿದ್ದೀನ್ ಫಾಳಿಲಿ, ಉಮ್ಮರ್ ಸಖಾಫಿ ಎಡಪಾಲ, ಅಬ್ದುಲ್ ಸತ್ತಾರ್ ಅಹ್ಸನಿ, ಹುಸೈನಾರ್ ಸಅದಿ, ಉಮ್ಮರ್ ಮುಸ್ಲಿಯಾರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಇರ್ಫಾನ್ ನಿಝಾಮಿ ಪ್ರಾರ್ಥನೆ ನೆರವೇರಿಸಿದರು. ಬಷೀರ್ ಸಖಾಫಿ ಸ್ವಾಗತಿಸಿ, ವಂದಿಸಿದರು.