ಮಡಿಕೇರಿ, ಜೂ.೨೯: ಗೋಣಿಕೊಪ್ಪ ಲಯನ್ಸ್ ಸಂಸ್ಥೆಯ ವಾರ್ಷಿಕ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿರ್ಗಮಿತ ಅಧ್ಯಕ್ಷ ಸಿ.ಪಿ ಬೊಪಣ್ಣ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀಮಂತ್ ಮುತ್ತಣ್ಣ ಅವರಿಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ನೂತನ ಕಾರ್ಯದರ್ಶಿಯಾಗಿ ಕೆ.ಎ ಕರುಂಬಯ್ಯ ಹಾಗೂ ಕೋಶಾಧಿಕಾರಿಯಾಗಿ ಎ.ಬಿ ಮಾದಪ್ಪ ಅವರು ಜವಾಬ್ಧಾರಿ ವಹಿಸಿಕೊಂಡರು.
ಮುಖ್ಯ ಅತಿಥಿಗಳಾಗಿ ಹಾಗೂ ಪದಗ್ರಹಣ ಅಧಿಕಾರಿಯಾಗಿ ಆಗಮಿಸಿದ್ದ ಮಾಜಿ ಜಿಲ್ಲಾ ಗವರ್ನರ್ ವಸಂತ್ ಕುಮಾರ್ ಶೆಟ್ಟಿ ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ನಂತರ ಲಯನ್ಸ್ ತತ್ವಗಳ ಕುರಿತು ಮಾತನಾಡಿದ ಅವರು, ಲಯನ್ಸ್ ಸಂಸ್ಥೆಯು ಕೇವಲ ಒಂದು ಸಂಘಟನೆಯಲ್ಲ, ಅದು ಸಮಾಜದ ಕಷ್ಟಕಾರ್ಪಣ್ಯಗಳಿಗೆ ಸ್ಪಂದಿಸುವ ಜಾಗತಿಕ ಆಶಾಕಿರಣವಾಗಿದೆ ಎಂದರು.
ಗೋಣಿಕೊಪ್ಪ ಲಯನ್ಸ್ ಶಿಕ್ಷಣ ಸಂಸ್ಥೆಯ ಸಾಧಕ ವಿದ್ಯಾರ್ಥಿಗಳಾದ ಸಿದ್ಧಾಂತ್ ಕಾವೇರಪ್ಪ (ಎಸ್‌ಎಸ್‌ಎಲ್‌ಸಿ ಟಾಪರ್), ನಿಕಿತಾ ವಿ.ಎ. (ಪಿಯುಸಿ ವಿಜ್ಞಾನ ವಿಭಾಗದ ಟಾಪರ್), ಅಯ್ಯಪ್ಪ ಎಂ. ಜಿ. (ಪಿಯುಸಿ ವಾಣಿಜ್ಯ ವಿಭಾಗದ ಟಾಪರ್) ಅವರುಗಳನ್ನು ಲಯನ್ಸ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಧನು ಉತ್ತಯ್ಯ ಹಾಗೂ ಇತರರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ನಿರ್ಗಮಿತ ಕಾರ್ಯದರ್ಶಿ ಸೌಮ್ಯ ಎಂ.ಬಿ, ಕೋಶಾಧಿಕಾರಿ ಐ.ಎಂ ಸೋಮಣ್ಣ, ಪ್ರಾದೇಶಿಕ ಅಧ್ಯಕ್ಷ ಡಾ. ಪಂಚಮ್ ತಿಮ್ಮಯ್ಯ ಹಾಗೂ ವಲಯ ಅಧ್ಯಕ್ಷ ಸಿ.ಟಿ. ಅಪ್ಪಣ್ಣ ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಆರಂಭದಲ್ಲಿ ಲಿರಿಶ್ ಚಿಣ್ಣಪ್ಪ ಧ್ವಜ ವಂದನೆ ನೆರವೇರಿಸಿದರು. ಚೇತನ್ ಗಣಪತಿ ಲಯನ್ಸ್ ನೀತಿ ಸಂಹಿತೆಯನ್ನು ವಾಚಿಸಿದರು. ನಿರ್ಗಮಿತ ಅಧ್ಯಕ್ಷ ಸಿ.ಪಿ ಬೋಪಣ್ಣ ಸ್ವಾಗತಿಸಿದರೆ, ನೂತನ ಕಾರ್ಯದರ್ಶಿ ಕೆ.ಎ ಕರುಂಬಯ್ಯ ವಂದನಾರ್ಪಣೆ ಮಾಡಿದರು.