ಚೆಟ್ಟಳ್ಳಿ, ಜೂನ್ ೨೯: ಮೂಲತ ಕೊಡಗಿನ ಅತ್ತೂರಿನವರಾದ ಮೈಸೂರಿನಲ್ಲಿ ನೆಲೆಸಿರುವ ಮೈಸೂರು ಸ್ಪೋರ್ಟ್ಸ್ ಶೂಟಿಂಗ್ ಅಕಾಡೆಮಿಯ ಸದಸ್ಯೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ೧೪ನೇ ಕರ್ನಾಟಕ ರಾಜ್ಯ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್-೨೦೨೬ ರಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರೈಫಲ್ ಅಸೋಸಿಯೇಷನ್ ಆಯೋಜಿಸಿದ್ದ ಈ ಸ್ಪರ್ಧೆಗಳು ಜೂನ್ ೧೦ರಿಂದ ೩೦ರವರೆಗೆ ಬೆಂಗಳೂರಿನ ಕ್ರೀಡಾ ಪ್ರಾಧಿಕಾರ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಶೂಟಿಂಗ್ ರೇಂಜ್‌ನಲ್ಲಿ ನಡೆದವು.

ಪ್ರೀತ್ ಅಪ್ಪಯ್ಯ ಅವರು ಪಾಯಿಂಟ್-೧೭೭ ಓಪನ್ ಸೈಟ್ ೧೦ ಮೀಟರ್ ಏರ್ ರೈಫಲ್ ಸೀನಿಯರ್ ಮಾಸ್ಟರ್ ಮಹಿಳಾ ವಿಭಾಗ ಹಾಗೂ ಪಾಯಿಂಟ್-೧೭೭ ಓಪನ್ ಸೈಟ್ ೧೦ ಮೀಟರ್ ಏರ್ ರೈಫಲ್ ಮಹಿಳಾ ವಿಭಾಗಗಳಲ್ಲಿ ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು.

೨೦೨೪ರಲ್ಲಿ ಶೂಟಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿರುವ ಅವರು ತರಬೇತುದಾರ ಎಚ್.ಎಸ್ ವಿವೇಕ್ ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇದೇ ವರ್ಷ ನಡೆದ ನಾಗರಾಜ್ ರಾವ್ ಜಗದಾಳೆ ಶೂಟಿಂಗ್ ಸ್ಪರ್ಧೆ ಮತ್ತು ಚಾಂಪಿಯನ್‌ಶಿಪ್‌ನಲ್ಲಿಯೂ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು.

ಶೂಟಿಂಗ್ ಮಾತ್ರವಲ್ಲದೆ ಪರ್ವತಾರೋಹಣ ಕ್ಷೇತ್ರದಲ್ಲಿಯೂ ಪ್ರೀತ್ ಅಪ್ಪಯ್ಯ ತಮ್ಮ ಛಾಪು ಮೂಡಿಸಿದ್ದಾರೆ. ಅವರು ೨೦೨೩ರಲ್ಲಿ ಆಫ್ರಿಕಾದ ಅತಿ ಎತ್ತರದ ಶಿಖರವಾದ ಕಿಲಿಮಂಜಾರೋ ಪರ್ವತ ಹಾಗೂ ೨೦೨೪ರಲ್ಲಿ ಯುರೋಪಿನ ಅತಿ ಎತ್ತರದ ಶಿಖರವಾದ ಎಲ್ಬçಸ್ ಪರ್ವತ ಏರಿ ಗಮನ ಸೆಳೆದಿದ್ದರು.

ಇವರು ಅಮ್ಮತ್ತಿಯ ದಿವಂಗತ ಹಾನರರಿ ಕ್ಯಾಪ್ಟನ್ ಕೆ.ಎಂ.ಅಪ್ಪಯ್ಯ ಹಾಗು ಗೌರಮ್ಮ ದಂಪತಿಯ ಪುತ್ರಿ ಹಾಗೂ ವಕೀಲರಾದ ಜಮ್ಮಡ ಎಂ. ಅಯ್ಯಣ್ಣ ಅವರ ಪತ್ನಿ.