ಚೆಟ್ಟಳ್ಳಿ, ಜೂ. ೨೯: ಕೇಂದ್ರ ಸಹಕಾರ ಸಚಿವಾಲಯ ಸ್ಥಾಪನೆಯಾಗಿ ಐದು ವರ್ಷ ಪೂರೈಸಿದ ಪ್ರಯುಕ್ತ ಸಹಕಾರ ಸಪ್ತಾಹದ ಅಂಗವಾಗಿ ಚೆಟ್ಟಳ್ಳಿಯ ನರೇಂದ್ರ ಮೋದಿ ಸಹಕಾರ ಭವನದಲ್ಲಿ ರೈತರ ಸಮಾವೇಶ ಹಾಗೂ ಸಹಕಾರ ಜಾಗೃತಿ ಸಭೆ ನಡೆಯಿತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಇಲಾಖೆ ಕೊಡಗು ಜಿಲ್ಲೆ ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಚೆಟ್ಟಳ್ಳಿ ಸಹಕಾರ ಸಂಘದ ಪ್ರತಿಯೊಂದು ಬೆಳವಣಿಗೆಯಲ್ಲೂ ಸದಸ್ಯರು ಮತ್ತು ರೈತರ ಶ್ರಮ ಅಡಕವಾಗಿದೆ ಎಂದು ಹೇಳಿದರು.
ಜಂಟಿ ಆರ್ಟಿಸಿ ದಾಖಲೆಗಳ ಕಾರಣದಿಂದ ಅನೇಕ ರೈತರು ಸರ್ಕಾರದ ಬಡ್ಡಿ ರಹಿತ ಸಾಲ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಹಕಾರ ಇಲಾಖೆ ಸರ್ಕಾರದೊಂದಿಗೆ ಚರ್ಚಿಸಬೇಕಾಗಿದೆ ಎಂದು ಅವರು ಒತ್ತಾಯಿಸಿದರು. ಸರ್ಕಾರದ ನೂತನ ನಿಯಮಾವಳಿಗಳಿಂದ ರೈತರು ಕಟ್ಟಿಬೆಳೆಸಿದ ಸಹಕಾರ ಸಂಘಗಳಿಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಉದ್ಘಾಟಿಸಿ ಮಾತನಾಡಿ, ದೇಶದ ರೈತರ ಹಿತಾಸಕ್ತಿ ಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ಸ್ಥಾಪಿಸಿದ್ದು, ಐದು ವರ್ಷಗಳ ಅವಧಿಯಲ್ಲಿ ಸಹಕಾರ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಹೆಜ್ಜೆಗಳನ್ನು ಇಟ್ಟಿದೆ ಎಂದರು.
ರೈತರಿಗೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ತಲುಪುತ್ತಿದ್ದು, ಸಹಕಾರ ಸಂಘಗಳು ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯಗಳನ್ನು ಒದಗಿಸುತ್ತಿವೆ. ಐದು ಲಕ್ಷ ರೂಪಾಯಿವರೆಗೆ ಬಡ್ಡಿರಹಿತ ಸಾಲ ನೀಡಲಾಗುತ್ತಿದ್ದು, ಚೆಟ್ಟಳ್ಳಿ ಸಹಕಾರ ಸಂಘದ ಕಾರ್ಯ ಚಟುವಟಿಕೆಗಳು ಮಾದರಿಯಾಗಿವೆ ಎಂದು ಶ್ಲಾಘಿಸಿದರು. ಯೂರಿಯಾ ಗೊಬ್ಬರದ ಕೊರತೆ ಕುರಿತು ವ್ಯಕ್ತವಾಗುತ್ತಿರುವ ಆತಂಕಗಳಿಗೆ ಪ್ರತಿಕ್ರಿಯಿಸಿದ ಅವರು, ಪ್ರತಿ ರೈತರಿಗೆ ಪ್ರತಿ ತಿಂಗಳು ಒಂದು ಚೀಲ ಯೂರಿಯಾ ಗೊಬ್ಬರ ಲಭ್ಯವಾಗುವ ವ್ಯವಸ್ಥೆ ಇದೆ ಎಂದು ಸ್ಪಷ್ಟಪಡಿಸಿದರು. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ೪ನಾಲ್ಕನೇ ಪುಟಕ್ಕೆ
(ಮೊದಲ ಪುಟದಿಂದ) ಯುದ್ಧ ಪರಿಸ್ಥಿತಿಯ ನಡುವೆಯೂ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಉಂಟಾಗದAತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.
ಯೂನಿಯನ್ ನಿರ್ದೇಶಕಿ ಹಾಗೂ ಸಹಕಾರ ತರಬೇತಿ ಕೇಂದ್ರದ ನಿವೃತ್ತ ಪ್ರಾಂಶುಪಾಲೆ ಎಂ.ಎA. ಶಾಮಲಾ ಅವರು ಕೇಂದ್ರ ಸಹಕಾರ ಸಚಿವಾಲಯದ ಉದ್ದೇಶಗಳ ಕುರಿತು ಮಾತನಾಡಿ, “ಸಹಕಾರದಿಂದ ಸಮೃದ್ಧಿ” ಎಂಬ ಧ್ಯೇಯದೊಂದಿಗೆ ಸಚಿವಾಲಯ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಹಕಾರ ಚಳವಳಿಯನ್ನು ಮತ್ತಷ್ಟು ಬಲಪಡಿಸುವುದು, ಉತ್ತಮ ಆಡಳಿತ ವ್ಯವಸ್ಥೆ ರೂಪಿಸುವುದು, ಯುವಜನರನ್ನು ಸಹಕಾರ ಕ್ಷೇತ್ರದತ್ತ ಆಕರ್ಷಿಸುವುದು ಹಾಗೂ ವಿವಿಧ ಯೋಜನೆಗಳ ಮೂಲಕ ರೈತರ ಮತ್ತು ದೇಶದ ಅಭಿವೃದ್ಧಿಗೆ ನೆರವಾಗುವುದು ಸಚಿವಾಲಯದ ಪ್ರಮುಖ ಉದ್ದೇಶಗಳಾಗಿವೆ ಎಂದು ವಿವರಿಸಿದರು.
ಸಂವಿಧಾನದ ೯೭ನೇ ತಿದ್ದುಪಡಿಯ ಮೂಲಕ ಸಹಕಾರ ಕ್ಷೇತ್ರಕ್ಕೆ ಹೆಚ್ಚಿನ ಸಾಂವಿಧಾನಿಕ ಮಾನ್ಯತೆ ದೊರೆತಿದ್ದು, ಜಾಗತೀಕರಣದ ಸವಾಲುಗಳ ನಡುವೆಯೂ ಸಹಕಾರ ಸಂಸ್ಥೆಗಳು ಖಾಸಗಿ ವಲಯದೊಂದಿಗೆ ಸ್ಪರ್ಧಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಿದೆ ಎಂದು ಹೇಳಿದರು.
ಜುಲೈ ಮೊದಲ ಶನಿವಾರವನ್ನು ಅಂತರರಾಷ್ಟ್ರೀಯ ಸಹಕಾರ ದಿನಾಚರಣೆಯಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ಪೇರಿಯನ ಪೂಣಚ್ಚ, ಸೋಮವಾರಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಪಿ.ಬಿ. ಮೋಹನ್ ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್. ನಂದೀಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪುತ್ತರಿರ ಗಣೇಶ್ ಭೀಮಯ್ಯ, ಕಣಜಾಲು ಪೂವಯ್ಯ, ಯೂನಿಯನ್ ಸಿಬ್ಬಂದಿ ಅರುಣ್ ಕುಮಾರ್, ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕರು, ಮಾಜಿ ನಿರ್ದೇಶಕರು ಹಾಗೂ ವಿವಿಧ ಸಂಘ-ಸAಸ್ಥೆಗಳ ಪದಾಧಿ ಕಾರಿಗಳು ಮತ್ತು ರೈತರು ಭಾಗವಹಿಸಿದ್ದರು. ಯೂನಿಯನ್ ವ್ಯವಸ್ಥಾಪಕ ಯೋಗೇಂದ್ರ ನಾಯಕ್ ಪ್ರಾರ್ಥನೆ ನೆರವೇರಿಸಿ, ಸ್ವಾಗತಿಸಿದರು.