ವೀರಾಜಪೇಟೆ, ಜೂ. ೨೯: ಅನ್ನಭಾಗ್ಯ ಯೋಜನೆಯಡಿ ಉಚಿತವಾಗಿ ನೀಡಬೇಕಾದ ಅಕ್ಕಿಗೆ ಕೆಲವು ಪಡಿತರ ಅಂಗಡಿಗಳಲ್ಲಿ ಫಲಾನುಭವಿಗಳಿಂದ ೫೦ ರಿಂದ ೧೦೦ ರವರೆಗೆ ಹಣ ವಸೂಲಿ ಮಾಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವೀರಾಜಪೇಟೆ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ವಿ. ಜಾನ್ಸನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವೀರಾಜಪೇಟೆಯ ಶಾಸಕರ ಕಚೇರಿಯಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗಾಂಧಿನಗರ, ಅರಮೇರಿ, ಕಡಂಗಮುರುರು, ಕಾಕೋಟುಪರಂಬು, ಹೆಗ್ಗಳ ಸೇರಿದಂತೆ ಕೆಲವು ಪಡಿತರ ಅಂಗಡಿಗಳ ವಿರುದ್ಧ ಉಚಿತ ಅಕ್ಕಿ ನೀಡದೆ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ವಿನಿತಾ ಕಾವೇರಮ್ಮ, ಹರೀಶ್ ಹಾಗೂ ಮಹಾದೇವ ಮಾತನಾಡಿ, ಕೆಲ ಪಡಿತರ ಅಂಗಡಿಗಳಲ್ಲಿ ಇಚ್ಛೆಯಿದ್ದರೆ ಹಣ ನೀಡಿ ಎಂಬ ಪತ್ರ ಅಳವಡಿಸಿದ್ದಾರೆ. ಹಣ ನೀಡದಿದ್ದರೆ ಅಕ್ಕಿ ನೀಡುವುದಿಲ್ಲ ಎಂದು ಫಲಾನುಭವಿಗಳನ್ನು ಅವಮಾನಿಸುವ ಹಾಗೂ ಸತಾಯಿಸುವ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿದರು.

ಅಂಗಡಿಗಳಿಗೆ ಸರ್ಕಾರ ಪ್ರತಿ ಕೆ.ಜಿ. ಅಕ್ಕಿಗೆ ರೂ.೧.೫೦ ಕಮಿಷನ್ ನೀಡುತ್ತಿರುವಾಗ ಸಿಬ್ಬಂದಿಗೆ ಸಂಬಳ ಇಲ್ಲ ಎಂಬ ನೆಪದಲ್ಲಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು ಸರಿಯಲ್ಲ. ಈ ಬಗ್ಗೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಜಾನ್ಸನ್, ಈ ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಯಾವುದೇ ಬದಲಾವಣೆ ಕಂಡುಬAದಿಲ್ಲ. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು. ಸರ್ಕಾರವೇ ಪಡಿತರ ಅಂಗಡಿಗಳ ಬಾಗಿಲಿಗೆ ಅಕ್ಕಿ ತಲುಪಿಸುತ್ತಿರುವಾಗ ಫಲಾನುಭವಿಗಳಿಂದ ಹಣ ಪಡೆಯುವುದು ನ್ಯಾಯಸಮ್ಮತವಲ್ಲ ಎಂದರು.

ಇದೇ ವೇಳೆ, ಆರ್ಥಿಕವಾಗಿ ಸದೃಢರಾಗಿರುವ ಕೆಲವು ತೋಟ ಮಾಲೀಕರು ಬಿಪಿಎಲ್ ಪಡಿತರ ಚೀಟಿ ಹೊಂದಿದ್ದು ಸರ್ಕಾರದ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಇಂತಹ ಪ್ರಕರಣಗಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು. ಕೆಲವು ಫಲಾನುಭವಿಗಳು ತಮ್ಮ ವ್ಯಾಪ್ತಿಯ ಅಂಗಡಿಯನ್ನು ಬಿಟ್ಟು ಬೇರೆ ಅಂಗಡಿಗಳಲ್ಲಿ ಪಡಿತರ ಪಡೆಯುತ್ತಿರುವ ಬಗ್ಗೆಯೂ ಗಮನ ಸೆಳೆದರು.

ಗೃಹಲಕ್ಷ್ಮಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸುವ ಕುರಿತು ಸರ್ಕಾರದಿಂದ ಯಾವುದೇ ಆದೇಶ ಬಂದಿಲ್ಲ. ಆದರೂ ಕೆಲವು ಸೈಬರ್ ಕೇಂದ್ರಗಳು ಅರ್ಜಿ ಪಡೆದು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವ ದೂರುಗಳು ಬಂದಿವೆ. ಈ ಹಿನ್ನೆಲೆ ಸದ್ಯ ಯಾರೂ ಹೊಸ ಅರ್ಜಿ ಸಲ್ಲಿಸಬಾರದು ಎಂದು ಜಾನ್ಸನ್ ಮನವಿ ಮಾಡಿದರು.

ಇದೇ ವೇಳೆ, ಪಡಿತರ ಇ-ಕೆವೈಸಿಗೆ ಸರ್ಕಾರ ನಿಗದಿಪಡಿಸಿರುವ ಶುಲ್ಕ ರೂ.೭೫ ಮಾತ್ರವಾಗಿದ್ದು, ಕೆಲವು ಸೈಬರ್ ಕೇಂದ್ರಗಳಲ್ಲಿ ರೂ.೨೫೦ರವರೆಗೆ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ ಎಂದು ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿ ಮಾಹಿತಿ ನೀಡಿದರು.

ಸಭೆಯಲ್ಲಿ ಸದಸ್ಯ ಮಹಾದೇವ ಮಾತನಾಡಿ, ವೀರಾಜಪೇಟೆಯಿಂದ ಬೆಂಗಳೂರಿಗೆ ರಾತ್ರಿ ೧೦ ಗಂಟೆಯ ನಂತರ ಸರ್ಕಾರಿ ಬಸ್ ಇಲ್ಲದ ಕಾರಣ ಪ್ರಯಾಣಿಕರು ಖಾಸಗಿ ಬಸ್‌ಗಳಿಗೆ ರೂ.೫೫೦ರವರೆಗೆ ಪಾವತಿಸಬೇಕಾಗುತ್ತಿದೆ. ಸರ್ಕಾರಿ ಬಸ್‌ನಲ್ಲಿ ಇದೇ ಪ್ರಯಾಣದ ದರ ರೂ.೩೦೦ ಮಾತ್ರವಾಗಿದ್ದು, ಈ ಬಗ್ಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕ್ರಮವಾಗಿಲ್ಲ ಎಂದು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿ ಸಂಚಾರ ನಿಯಂತ್ರಕ ಚಂದ್ರಶೇಖರ್, ಮೇಲಧಿಕಾರಿಗಳಿಂದ ಇನ್ನೂ ಯಾವುದೇ ಆದೇಶ ಬಂದಿಲ್ಲ ಎಂದು ತಿಳಿಸಿದರು.

ಸೆಸ್ಕ್ ಇಲಾಖೆಯ ಅಧಿಕಾರಿಗಳು ಗೃಹಜ್ಯೋತಿ ಯೋಜನೆ ಕುರಿತು ಮಾಹಿತಿ ನೀಡಿದರಲ್ಲದೆ, ಹಲವು ಗ್ರಾಮ ಪಂಚಾಯಿತಿಗಳು ವಿದ್ಯುತ್ ಬಾಕಿ ಉಳಿಸಿಕೊಂಡಿರುವುದನ್ನು ಸಭೆಗೆ ತಿಳಿಸಿದರು. ಕಾಕೋಟುಪರಂಬು ಗ್ರಾಮ ಪಂಚಾಯಿತಿ ಮಾತ್ರವೇ ಸುಮಾರು ರೂ.೨೪ ಲಕ್ಷ ವಿದ್ಯುತ್ ಬಾಕಿ ಉಳಿಸಿಕೊಂಡಿದೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಉದ್ಯೋಗಾಧಿಕಾರಿ ಮಂಜುನಾಥ್, ತಾಲೂಕು ಪಂಚಾಯಿತಿ ಗ್ಯಾರಂಟಿ ಯೋಜನೆ ನಿರ್ವಾಹಕ ವಿ.ಟಿ. ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಾದ ರೀತಾ, ತಂಗಮ್ಮ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.