ಮಡಿಕೇರಿ, ಜೂ. ೨೮: ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ನೀಡುವ ಮೂಲಕ ಜಿಲ್ಲೆಯಾದ್ಯಂತ ಭಾನುವಾರ ರಾಷ್ಟಿçÃಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಜಿಲ್ಲೆಯ ವಿವಿಧ ಲಸಿಕಾ ಕೇಂದ್ರಗಳಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸAಸ್ಥೆಗಳ ಪ್ರಮುಖರು ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಅಭಿಯಾನದ ಮೊದಲ ದಿನವಾದ ಭಾನುವಾರ ಜಿಲ್ಲೆಯಲ್ಲಿ ಒಟ್ಟು ೩೧,೬೫೭ ಮಕ್ಕಳಿಗೆ ಲಸಿಕೆ ಹಾಕಲಾಗಿದ್ದು, ಈ ಮೂಲಕ ೨೯,೦೧೧ ಗುರಿಗಿಂತ ಹೆಚ್ಚಿನ ಮಕ್ಕಳಿಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾದ ಹಿನ್ನೆಲೆ ಶೇ ೧೦೯.೧೨ ಗುರಿಯನ್ನು ಸಾಧಿಸಿದಂತಾಗಿದೆ.
ಮಡಿಕೇರಿ ಗ್ರಾಮಾಂತರ ವಿಭಾಗದಲ್ಲಿ ೬೭೦೧ ಲಸಿಕೆ ಹಾಕುವ ಗುರಿ ಹೊಂದಲಾಗಿತ್ತು. ೭೦೦೯ ಲಸಿಕೆ ನೀಡಲಾಗಿದ್ದು, ಶೇ ೧೦೩.೭ ಗುರಿ ಸಾಧನೆಯಾಗಿದೆ. ಮಡಿಕೇರಿ ನಗರ ವ್ಯಾಪ್ತಿಯಲ್ಲಿ ೧೧೨೨ ಗುರಿ ಪೈಕಿ ೧೯೧೬ ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ ೧೭೦.೮ ಸಾಧನೆಯಾಗಿದೆ. ಈ ಮೂಲಕ ಮಡಿಕೇರಿ ತಾಲೂಕಿನಲ್ಲಿ ೮೯೨೫ ಮಕ್ಕಳಿಗೆ ಲಸಿಕೆ ನೀಡಿ ಶೇ ೧೧೩.೨ ಗುರಿ ಮುಟ್ಟಲಾಗಿದೆ. ಸೋಮವಾರಪೇಟೆ ಗ್ರಾಮಾಂತರ ವಿಭಾಗದಲ್ಲಿ ೯೮೭೧ ಗುರಿ ಪೈಕಿ ೧೦,೯೩೩ ಮಕ್ಕಳಿಗೆ ಲಸಿಕೆ ನೀಡಿ ಶೇ ೧೧೦.೮ ಗುರಿ ಸಾಧಿಸಲಾಗಿದೆ. ನಗರ ವ್ಯಾಪ್ತಿಯಲ್ಲಿ ೨೪೦ ಗುರಿ ಹೊಂದಲಾಗಿತ್ತು. ೨೯೧ ಮಕ್ಕಳಿಗೆ ಲಸಿಕೆ ನೀಡಲಾಗಿದ್ದು, ಶೇ ೧೨೧ ಗುರಿ ಸಾಧಿಸಿ ತಾಲೂಕು ವ್ಯಾಪ್ತಿಯಲ್ಲಿ ಶೇ ೧೧೧ ಗುರಿ ಸಾಧಿಸಿದಂತಾಗಿದೆ.
ವೀರಾಜಪೇಟೆ ಗ್ರಾಮಾಂತರ ವಿಭಾಗದಲ್ಲಿ ೯೭೪೧ ಗುರಿ ಪೈಕಿ ೧೦,೩೪೬ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ನಗರ ವ್ಯಾಪ್ತಿಯಲ್ಲಿ ೧೨೭೬ರಲ್ಲಿ ೧೧೬೨ ಮಕ್ಕಳಿಗೆ ಲಸಿಕೆ ನೀಡಲಾಗಿದೆ. ಶೇ ೯೧ ಗುರಿ ಸಾಧಿಸಿದಂತಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಒಟ್ಟು ೧೧೫೦೮ ಮಕ್ಕಳಿಗೆ ಲಸಿಕೆ ನೀಡಿ ಶೇ ೧೦೪ ಸಾಧನೆ ಮಾಡಿದೆ.
ಮಡಿಕೇರಿ
ಮಡಿಕೇರಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ವಿವಿಧ ಸಂಘ-ಸAಸ್ಥೆಗಳ ಮುಖ್ಯಸ್ಥರು ಐದು ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ರವೀಂದ್ರ ರೈ ಮಾತನಾಡಿ, ಪೋಲಿಯೋ ನಿರ್ಮೂಲನೆಗೆ ವಿಶ್ವ ಆರೋಗ್ಯ ಸಂಸ್ಥೆ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಂಸ್ಥೆ, ರೋಟರಿ ಹಾಗೂ ರೆಡ್ಕ್ರಾಸ್ ಸೇರಿದಂತೆ ಹಲವು ಸಂಘಟನೆಗಳು ಸರ್ಕಾರದೊಂದಿಗೆ ಕೈಜೋಡಿಸಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್ ಮಾಹಿತಿ ನೀಡಿ, ಕೊಡಗು ಜಿಲ್ಲೆಯಲ್ಲಿ ಐದು ವರ್ಷದೊಳಗಿನ ೨೯,೦೧೧ ಮಕ್ಕಳು ಗುರುತಿಸಲ್ಪಟ್ಟಿದ್ದು, ಅವರಲ್ಲಿ ೨೬,೩೭೩ ಗ್ರಾಮೀಣ ಹಾಗೂ ೨,೬೩೮ ನಗರ ಪ್ರದೇಶದ ಮಕ್ಕಳಿದ್ದಾರೆ. ವಲಸೆ ಮಕ್ಕಳನ್ನೂ ಗುರುತಿಸಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಆರ್ಸಿಎಚ್ ಅಧಿಕಾರಿ ಡಾ. ಮಧುಸೂದನ ಮಾತನಾಡಿ, ಜಿಲ್ಲೆಯಲ್ಲಿ ೪೭೧ ಲಸಿಕಾ ಬೂತ್ಗಳು ಹಾಗೂ ಜನಸಂದಣಿ ಪ್ರದೇಶಗಳು, ಬಸ್ ನಿಲ್ದಾಣಗಳು ಮತ್ತು ಪ್ರವಾಸಿ ಕೇಂದ್ರಗಳಲ್ಲಿ ೩೩ ಟ್ರಾನ್ಸಿಟ್ ಬೂತ್ಗಳನ್ನು ತೆರೆಯಲಾಗಿದೆ. ಮಡಿಕೇರಿ ತಾಲೂಕಿನಲ್ಲಿ ಒಂದು ಸಂಚಾರಿ ತಂಡವನ್ನೂ ನಿಯೋಜಿಸಲಾಗಿದೆ. ಜಿಲ್ಲಾದ್ಯಂತ ೧,೯೫೨ ಲಸಿಕೆ ನೀಡುವ ಸಿಬ್ಬಂದಿ ಹಾಗೂ ೮೪ ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು. ತಾ. ೨೯ ಮತ್ತು ೩೦ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾ. ೨೯ರಿಂದ ಜುಲೈ ೧ರವರೆಗೆ ನಗರ ಪ್ರದೇಶಗಳಲ್ಲಿ ಮನೆ-ಮನೆಗೆ ಭೇಟಿ ನೀಡಿ ಲಸಿಕೆ ಪಡೆಯದೇ ಉಳಿದ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಸನತ್ ಕುಮಾರ್, ಡಾ. ಇಂದೂದರ, ರೋಟರಿ ಸಂಸ್ಥೆಯ ಮನೋಹರ್ ಕಾಮತ್, ರತನ್ ತಮ್ಮಯ್ಯ, ಡಾ. ಚಂದ್ರಶೇಖರ್, ಡಾ. ದಿವ್ಯಾರಾಣಿ, ಆರೋಗ್ಯ ಶಿಕ್ಷಣಾಧಿಕಾರಿ ಪಾಲಕ್ಷ, ಶ್ರೀಕಾಂತ್, ದೇವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.