ಮಡಿಕೇರಿ, ಜೂ. ೨೪: ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷಿö್ಮ ಚೌಧರಿ ಅವರು ತಾ. ೩೦, ಜುಲೈ ೧ ಮತ್ತು ೨ ರಂದು ಕೊಡಗು ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ತಾ. ೩೦ ರಂದು ಬೆಳಿಗ್ಗೆ ೯.೧೫ ಗಂಟೆಗೆ ಪೊನ್ನಂಪೇಟೆ ತಾಲೂಕಿನ ನಾಗರಹೊಳೆಗೆ ಆಗಮಿಸಿ ನಾಗರಹೊಳೆ ಅರಣ್ಯ ವಾಸಿಗಳು ವಾಸಿಸುವ ಹಾಡಿಗೆ ಭೇಟಿ ನೀಡಲಿದ್ದಾರೆ. ನಂತರ ನಾಗರಹೊಳೆ ಗದ್ದೆಹಾಡಿ ಮತ್ತು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಲಿದ್ದಾರೆ.
ಬಳಿಕ ಬೆಳಿಗ್ಗೆ ೧೧.೩೦ ಗಂಟೆಗೆ ತಿತಿಮತಿ ಗ್ರಾಮದ ಆನೆ ಮಾವುತರು ವಾಸಿಸುವ ಹಾಡಿಗೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ ೧೨.೩೦ ಗಂಟೆಗೆ ತಿತಿಮತಿಯ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಭೇಟಿ, ಮಧ್ಯಾಹ್ನ ೨ ಗಂಟೆಗೆ ಗೋಣಿಕೊಪ್ಪ ಸರ್ಕಾರಿ ಆಸ್ಪತ್ರೆಗೆ, ಮಧ್ಯಾಹ್ನ ೩.೩೦ ಗಂಟೆಗೆ ವೀರಾಜಪೇಟೆಯಲ್ಲಿ ವಸತಿ ಶಾಲೆಗೆ ಭೇಟಿ, ಸಂಜೆ ೪.೩೦ ಗಂಟೆಗೆ ವೀರಾಜಪೇಟೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ.
ಜುಲೈ ೧ ರಂದು ಬೆಳಿಗ್ಗೆ ೯ ಗಂಟೆಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ನಂತರ ಬೆಳಿಗ್ಗೆ ೧೧ ಗಂಟೆಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಆಯೋಜಿಸಿರುವ ಪಿಒಎಸ್‌ಎಚ್ (ಪೋಸ್) ಅಧಿನಿಯಮ ೨೦೧೩ರ ತರಬೇತಿ ಹಾಗೂ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ೧೨ ಗಂಟೆಗೆ ನಗರದ ಗೌಡ ಸಮಾಜದ ರಸ್ತೆಯಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ವಿವಿಧೋದ್ದೇಶ ಒಳಾಂಗಣ ಸಭಾಂಗಣದಲ್ಲಿ ಕಾಲೇಜು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲಿದ್ದಾರೆ. ನಂತರ ಸಂಜೆ ೪ ಗಂಟೆಗೆ ಕುಶಾಲನಗರ ಕೂಡಿಗೆಯ ಟಾಟಾ ಕಾಫಿ ಕ್ಯೂರಿಂಗ್ ವರ್ಕ್ಸ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಲಿದ್ದಾರೆ. ಸಂಜೆ ೫ ಗಂಟೆಗೆ ಕುಶಾಲನಗರದ ಮೆಟ್ರಿಕ್ ನಂತರದ ಒಬಿಸಿ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಲಿದ್ದಾರೆ.
ಜುಲೈ ೨ ರಂದು ಬೆಳಿಗ್ಗೆ ೯ ಗಂಟೆಗೆ ನಗರದ ಕೊಡವ ಸಮಾಜದ ಹತ್ತಿರ ಇರುವ ಮಹಿಳಾ ಪೊಲೀಸ್ ಠಾಣೆಗೆ ಭೇಟಿ ನೀಡಲಿದ್ದಾರೆ. ಬೆಳಿಗ್ಗೆ ೧೧ ಗಂಟೆಗೆ ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಮಹಿಳಾ ಸ್ಪಂದನಾ ಕಾರ್ಯಕ್ರಮ ಹಾಗೂ ಮಹಿಳಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ ೩ ಗಂಟೆಗೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ. ಮಾರುತಿ ವಿ.ಎಸ್. ತಿಳಿಸಿದ್ದಾರೆ.