ವೀರಾಜಪೇಟೆ, ಜೂ. ೨೪: ಹೋಂ ಸ್ಟೇಗಳಿಗೆ ವಿದೇಶಿ ಪ್ರವಾಸಿಗರು ಬಂದಲ್ಲಿ ಅಂತಹ ಪ್ರವಾಸಿಗರ ಸಂಪೂರ್ಣ ಮಾಹಿತಿಯನ್ನು ಪಡೆದು ಕೊಳ್ಳಬೇಕು ಹಾಗೂ ಹೋಂ ಸ್ಟೇಗಳಲ್ಲಿ ನಡೆಯುವಂತ ವಿಚಾರಗಳ ಮಾಹಿತಿಯನ್ನು ಇಲಾಖೆಗೆ ನೀಡುವಂತಾಗಬೇಕು ಎಂದು ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಹೇಳಿದರು

ವೀರಾಜಪೇಟೆ ವೃತ್ತ ನಿರೀಕ್ಷಕರ ಕಛೇರಿಯ ಸಭಾಂಗಣದಲ್ಲಿ ನಗರ ಮತ್ತು ಗ್ರಾಮಾಂತರ ಠಾಣಾ ಉಪವಿಭಾಗ ವ್ಯಾಪ್ತಿಯ ಹೋಂ ಸ್ಟೇಗಳ ಮಾಲೀಕರು ಮತ್ತು ವ್ಯವಸ್ಥಾಪಕರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಎಲ್ಲಾ ಹೋಂಸ್ಟೇಗಳು ರಾಜ್ಯ ಪ್ರವಾಸೋದ್ಯಮ ಇಲಾಖೆಅಡಿಯಲ್ಲಿ ನೋಂದಾವಣೆಗೊAಡಿರಬೇಕು ಇಲ್ಲವಾದಲ್ಲಿ ಅಂತಹ ಹೋಂಸ್ಟೇಗಳನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುವುದು. ಪ್ರತಿ ಹೋಂ ಸ್ಟೇಗಳಲ್ಲಿ ಸಿಸಿ ಕ್ಯಾಮರಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು ಹಾಗೂ ೩೦ ದಿನದ ದೃಶ್ಯಾವಳಿಗಳನ್ನು ಸಂಗ್ರಹಿಸಿಡಬೇಕು. ಯಾವುದೇ ಸಂದರ್ಭ ಪೊಲೀಸ್ ಅಧಿಕಾರಿಗಳು ಬಂದಾಗ ಕ್ಯಾಮರ ನೀಡುವಂತಹ ಸೌಲಭ್ಯವಿರಬೇಕೆಂದು ತಿಳಿಸಿದರು.

ಹೋಂ ಸ್ಟೇ ಗಳಿಗೆ ಭೇಟಿ ನೀಡುವ ಪ್ರವಾಸಿಗರು ಯಾವ ಉದ್ದೇಶಕ್ಕಾಗಿ ಬಂದಿದ್ದಾರೆ ಎಂಬ ಮಾಹಿತಿಯನ್ನು ಮತ್ತು ಅವರ ವಿಳಾಸವನ್ನು ಪಡೆದುಕೊಳ್ಳಬೇಕು. ಹೋಂ ಸ್ಟೇಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಹೆಸರು ವಿಳಾಸ ಕಡ್ಡಾಯವಾಗಿ ನೋಂದಾವಣೆ ಪುಸ್ತಕದಲ್ಲಿರಬೇಕು ಎಂದರಲ್ಲದೆ ಪ್ರತಿ ತಿಂಗಳು ೪ನೇ ಬುಧವಾರ ಹೋಂಸ್ಟೇ ಮಾಲೀಕರುಗಳ ಸಭೆ ನಡೆಸಲಾಗುವುದು ಸಭೆಗೆ ತಪ್ಪದೆ ಹಾಜರಾಗುವಂತೆ ತಿಳಿಸಿದರು.

ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಮಾತನಾಡಿ, ಪ್ರತಿಯೊಬ್ಬರು ಕಾನೂನಿನ ನಿಯಮವನ್ನು ಪಾಲಿಸುವಂತಾಗಬೇಕು ಎಂದರು. ಸಭೆಯಲ್ಲಿ ನಗರ ಮತ್ತು ಗ್ರಾಮಾಂತರ ಠಾಣಾಧಿಕಾರಿಗಳಾದ ಹೆಚ್.ಎಸ್.ಪ್ರಮೋದ್, ಎನ್.ಜಿ.ಲತಾ, ಟಿ.ಎಂ. ಕಾವೇರಪ್ಪ ಮತ್ತು ವಾಣಿಶ್ರೀ ಉಪಸ್ಥಿತರಿದ್ದರು.