ಸುಂಟಿಕೊಪ್ಪ, ಜೂ. ೨೪: ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಪರಿಣಾಮಕಾರಿಯಾಗಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಹೇಳಿದರು.

ಗದ್ದೆಹಳ್ಳ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಎಲ್‌ಕೆಜಿ ತರಗತಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆಯ ಕಲಿಕೆ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರ ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ತರಗತಿಗಳಿಗೆ ಉತ್ತೇಜನ ನೀಡುತ್ತಿದೆ ಎಂದು ಹೇಳಿದರು.

ಶಾಲೆಯ ಅಭಿವೃದ್ಧಿ ಕಾಮಗಾರಿಗಳಿಗಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ೫ ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ ಅವರು, ಗದ್ದೆಹಳ್ಳ ಸರ್ಕಾರಿ ಶಾಲೆಯ ಮೈದಾನವನ್ನು ಟರ್ಫ್ ಮೈದಾನವನ್ನಾಗಿ ಅಭಿವೃದ್ಧಿಪಡಿಸಬೇಕೆಂಬ ಆಮ್ಮೆಟ್ಟಿ ಫುಟ್‌ಬಾಲ್ ಕ್ಲಬ್‌ನ ಮನವಿಗೆ ಪ್ರತಿಕ್ರಿಯಿಸಿ, ಎರಡು ಶಾಲೆಗಳ ಶಾಲಾಭಿವೃದ್ಧಿ ಸಮಿತಿಗಳ ಸಭೆಯಲ್ಲಿ ನಿರ್ಧಾರ ಕೈಗೊಂಡು ಸರ್ಕಾರದ ಅನುಮತಿ ಪಡೆಯಬೇಕಿದೆ. ಸಂಜೆಯ ವೇಳೆಯಲ್ಲಿ ಮಾತ್ರ ಕ್ಲಬ್ ಹಾಗೂ ಸಾರ್ವಜನಿಕರಿಗೆ ಮೈದಾನ ಬಳಸಲು ಅವಕಾಶ ಕಲ್ಪಿಸಲಾಗುವುದು. ಯಾವುದೇ ಅನ್ಯಚಟುವಟಿಕೆಗಳಿಗೆ ಮೈದಾನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿ, ಮೂರು ವರ್ಷಗಳ ಕನಸು ನನಸಾಗಿದೆ. ಶಾಲೆಯ ಬೆಳವಣಿಗೆಯಲ್ಲಿ ಸ್ಥಳೀಯರ ಸಹಕಾರ ಶ್ಲಾಘನೀಯವಾಗಿದ್ದು, ಶಾಲೆಗೆ ತುರ್ತಾಗಿ ತಡೆಗೋಡೆ ಹಾಗೂ ಶೌಚಾಲಯ ನಿರ್ಮಾಣ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಇ. ಕರೀಂ ಮಾತನಾಡಿ, ೨೦೦೨ರಲ್ಲಿ ಆರಂಭವಾದ ಶಾಲೆಗೆ ೨೦೦೪ರಲ್ಲಿ ಸ್ವಂತ ಕಟ್ಟಡ ದೊರಕಿತ್ತು. ಮುಂದಿನ ವರ್ಷ ಶಾಲೆಯ ೨೫ನೇ ವರ್ಷದ ರಜತ ಮಹೋತ್ಸವ ನಡೆಯಲಿದ್ದು, ಗ್ರಾಮಸ್ಥರ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಮೋಹನ್ ರಾಜ್, ಯಂಕನ ಗಿರೀಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜಿ. ಲೋಕೇಶ್, ಹೆಚ್.ಯು. ರಫೀಕ್ ಖಾನ್ ಹಾಗೂ ಪಿ.ಆರ್. ಸುಕುಮಾರ್ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿಎಂಸಿ ಅಧ್ಯಕ್ಷೆ ಸಕೀನ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಶಿವಮ್ಮ ಮಹೇಶ್, ಮಾಜಿ ಸದಸ್ಯೆ ಗೀತಾ, ಯಂಕನ ಶ್ರೀರಾಮ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಸೌಭಾಗ್ಯ, ಎಲ್‌ಕೆಜಿ ಎಸ್‌ಡಿಎಂಸಿ ಅಧ್ಯಕ್ಷ ರಶೀದ್, ಸ್ಯಾಂಡಲ್‌ವುಡ್ ತೋಟದ ವ್ಯವಸ್ಥಾಪಕ ನಿಸಾರ್, ಬಾಳೆಕಾಡು ತೋಟದ ವ್ಯವಸ್ಥಾಪಕ ಪ್ರಸನ್ನ, ಇಬ್ರಾಹಿಂ, ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮು ಖ್ಯೋಪಾಧ್ಯಾಯ ವೈ.ಸಿ. ಕುಮಾರ್, ಪಟ್ಟೆಮನೆ ಚರಣ್, ಸೋಮಶೇಖರ್ ಹಾಗೂ ಗದ್ದೆಹಳ್ಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯೆ ಹೇಮಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನೆರೆದಿದ್ದವರ ಮೆಚ್ಚುಗೆಗೆ ಪಾತ್ರವಾಯಿತು.