ಚೆಯ್ಯಂಡಾಣೆ, ಜೂ. ೨೧: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ತಿತಿಮತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಯೋಜನೆಯ ಪದಾಧಿಕಾರಿಗಳು ಹಾಗೂ ಶಾಲಾ ಮಕ್ಕಳು ಶಾಲೆಯ ಆವರಣದೊಳಗೆ ವಿವಿಧ ಗಿಡಗಳನ್ನು ನೆಟ್ಟರು. ನಂತರ ಶಾಲಾ ಮಕ್ಕಳಿಗೆ ವಿವಿಧ ಹಸಿರು ಎಲೆಗಳನ್ನು ಗುರುತಿಸಿ ಹೇಳುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಅತೀ ಹೆಚ್ಚು ಹಸಿರೆಲೆಗಳನ್ನು ಗುರುತಿಸಿ ಹೇಳಿದ ಮಕ್ಕಳಿಗೆ ಬಹುಮಾನಗಳನ್ನು ಸಂಘದ ವತಿಯಿಂದ ವಿತರಿಸಲಾಯಿತು. ಶಾಲಾ ಮಕ್ಕಳಿಗೆ ಪರಿಸರ ಜಾಗೃತಿಯ ಕುರಿತು ವಿವರಣೆ ನೀಡಲಾಯಿತು. ಹಾಗೂ ಗಿಡಗಳನ್ನು ನೆಡುವುದರಿಂದ ಆಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಠಲ್, ವಲಯದ ಮೇಲ್ವಿಚಾರಕಿ ಗೀತಾ, ಶೌರ್ಯ ವಿಪತ್ತು ತಂಡದ ಸದಸ್ಯರುಗಳಾದ ಜಯಪ್ರಕಾಶ್, ಪದ್ಮ, ಸರೋಜ, ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.