ಸೋಮವಾರಪೇಟೆ, ಜೂ. ೧೯ : ೭ ಕಾಡಾನೆಗಳ ಹಿಂಡು ನಿನ್ನೆ ತಡರಾತ್ರಿ ಕಾಫಿ ತೋಟಕ್ಕೆ ನುಗ್ಗಿ ಕಾಫಿಗಿಡಗಳನ್ನು ತುಳಿದು ಹಾನಿ ಮಾಡಿರುವ ಘಟನೆ ಸಮೀಪದ ಕೂತಿ ಗ್ರಾಮದಲ್ಲಿ ನಡೆದಿದೆ.

ಕೂತಿ ಗ್ರಾಮದ ಡಿ.ಎಸ್. ಸೋಮಶೇಖರ್ ಅವರಿಗೆ ಸೇರಿದ ಕಾಫಿ ತೋಟಕ್ಕೆ ಲಗ್ಗೆಯಿಟ್ಟಿರುವ ಎರಡು ಮರಿಯಾನೆಗಳನ್ನು ಒಳಗೊಂಡ ಏಳು ಕಾಡಾನೆಗಳು, ತೋಟದಲ್ಲಿದ್ದ ಗಿಡಗಳನ್ನು ತುಳಿದು ನಾಶಪಡಿಸಿವೆ. ಅಲ್ಲದೆ ಬೈನೆ ಮರವನ್ನು ಮುರಿದು ಹಾಕಿದೆ. ಕಳೆದ ಎರಡು ದಿನಗಳಿಂದ ಕಾಡಾನೆಗಳು ಇದೇ ಭಾಗದಲ್ಲಿ ಸಂಚರಿಸುತ್ತಿದ್ದು, ತೋಟಗಳಿಗೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತೆರಳಲು ಸ್ಥಳೀಯರು ಭಯಪಡುವಂತಾಗಿದೆ. ಬಿಸಿಲೆ ಅರಣ್ಯ ಪ್ರದೇಶದಿಂದ ಒಂದು ವಾರದ ಹಿಂದೆ ನೀತಿ ಬೆಟ್ಟಕ್ಕೆ ಬಂದಿರುವ ಆನೆಗಳು ಇದೀಗ ನಗರಳ್ಳಿ, ಕೂತಿ, ಬಾಣಗೇರಿ ಹಾಗೂ ಮಾಗೇರಿ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.