ಮಡಿಕೇರಿ, ಜೂ. ೧೯: ಈ ಬದುಕು., ಜೀವನ ಏನನ್ನೆಲ್ಲ ಕಲಿಸುತ್ತದೆ., ಹೇಗೆಲ್ಲ ಆಡಿಸುತ್ತದೆ ಎಂಬದಕ್ಕೆ ಕಣ್ಣ ಮುಂದೆಯೇ ಸಾಕಷ್ಟು ಚಿತ್ರಣಗಳು ಕಾಣಸಿಗುತ್ತವೆ., ಜೀವನ ಸಾಗಿಸಲು ಏನೆಲ್ಲ ಕೆಲಸ ಮಾಡಬೇಕಾಗುತ್ತದೆ ಎಂಬದನ್ನು ಕೂಡ ಕಾಣುತ್ತೇವೆ., ಹೊಟ್ಟೆ ಹೊರೆಯಲೋಸ್ಕರ ಭಿಕ್ಷೆ ಬೇಡುವದರಿಂದ ಹಿಡಿದು ಕೂಲಿ ಕೆಲಸ ಕೂಡ ಮಾಡಬೇಕಾಗುತ್ತದೆ. ಅದರಲ್ಲೂ ಕಸದೊಂದಿಗೆ ಕೆಲಸ ಮಾಡುತ್ತಾ ಜೀವನ ನಿರ್ವಹಣೆ ಮಾಡುವದಿದೆಯಲ್ಲ..? ನೋಡುಗರಿಗೆ ಅದು ಅಸಹ್ಯವೆನಿಸಬಹುದು. ಆದರೆ ತುಂಡು ಬಟ್ಟೆ-ಗೇಣು ಹೊಟ್ಟೆಗಾಗಿ ಅದೂ ಕೂಡ ಒಂದು ಕಸುಬು ಎಂದು ಪರಿಗಣಿಸಿದವರಿಗೆ ಅದು ತೃಪ್ತಿ ಕೊಡುವ ಕಾಯಕವಾಗುತ್ತದೆ..!

ಒಂದೆಡೆ ಕೊಳೆತು ನಾರುತ್ತಿರುವ ಕಸದ ರಾಶಿ., ಅದರ ಮೇಲೆಲ್ಲ ಏನಾದರೂ ಸಿಕ್ಕೀತೆಂದು ಆಹಾರ ಅರಸುತ್ತಾ ಓಡಾಡುವ ನಾಯಿಗಳು., ಮತ್ತೆ., ಮತ್ತೆ ಕಸ ತಂದು ಸುರಿಯುತ್ತಿರುವ ಕಸದ ಗಾಡಿಗಳು.., ಜೊತೆಗೆ ಸುರಿಯುತ್ತಿರುವ ಮಳೆಯಲ್ಲೂ ಕಸದ ರಾಶಿಯೊಳಗೆ ಏನನ್ನೋ ಹುಡುಕುತ್ತಿರುವ ಒಂದಷ್ಟು ಮಂದಿ ಅಸಾಹಯಕ ಕಾರ್ಮಿಕರು..!

ಇದು ಮಡಿಕೇರಿಯ ಸ್ಟೋನ್ ಹಿಲ್ ಬಳಿ ಇರುವ ಕಸದ ರಾಶಿಯೊಳಗೆ ಕಂಡು ಬಂದ ಜೀವನದ ಹುಡುಕಾಟದಲ್ಲಿರುವ ಬಡ ಕಾರ್ಮಿಕರ ಅಸಾಯಕ ಪರಿಸ್ಥಿತಿ. ಕಸದಲ್ಲಿ ಬರುವ ಪ್ಲಾಸ್ಟಿಕ್, ಬಾಟಲಿ ಸೇರಿದಂತೆ ಮರುಬಳಕೆಯಾಗುವ ವಸ್ತುಗಳನ್ನು ಹೆಕ್ಕಲು ನಗರಸಭೆಯಿಂದ ಗುಜರಿಯವರಿಗೆ ಗುತ್ತಿಗೆ ನೀಡಿದ್ದು, ಆ ಗುತ್ತಿಗೆದಾರರು ನೇಮಿಸಿರುವ ಕಾರ್ಮಿಕರು ಕೈಗಳಿಗೆ ಯಾವದೇ ಗವಸು, ಕಾಲಿಗೆ ಬೂಟು, ಮುಖಗವಸು ಇಲ್ಲದೆ ಹಾಗೆಯೇ ಕಸದ ಕೊಂಪೆಯೊಳಗೆ ಹುಡುಕಾಡುತ್ತಿದ್ದರು. ಕೈಗೆ ಸಿಕ್ಕಿದ ಬಾಟಲಿ ಇನ್ನಿತರ ವಸ್ತುಗಳನ್ನು ಹೆಕ್ಕಿ ಪಕ್ಕದಲ್ಲಿ ಜೋಡಿಸಿಡುತ್ತಿದ್ದರು. ಅಲ್ಲೇ ಜೋಡಿಸಿಟ್ಟ ವಸ್ತುಗಳು ತುಂಬಿರುವ ಕೋಣೆಯೇ ಇವರ ತಂಗುದಾಣ. ಕಸದ ವಾಸನೆ, ನೊಣಗಳ ನಡುವೆ ಊಟ-ನಿದ್ರೆಯೊಂದಿಗೆ ಇವರ ಬದುಕು. ಶಾಲೆ ಆರಂಭವಾಗಿದ್ದರೂ ಶಾಲೆಯನ್ನು ಕಾಣದ ಕಾರ್ಮಿಕರ ಪುಟಾಣಿ ಮಕ್ಕಳಿಗೆ ಅದೇ ಕಸದ ಕೊಂಪೆಯೇ ಆಟದ ಮೈದಾನ., ಯಾರೋ ಎಸೆದ, ಕಸದೊಂದಿಗೆ ಸಿಕ್ಕಿದ ಮುರಿದು ಹೋಗಿರುವ ಮಕ್ಕಳ ಪುಟಾಣಿ ಸೈಕಲ್‌ನಲ್ಲಿ ತಮ್ಮಿಷ್ಟದಂತೆ ಆಟವಾಡುತ್ತಿದ್ದರು..! ಕೆಲಸ ಅರಸಿಕೊಂಡು ವಲಸೆ ಬಂದವರು ಯಾವದೇ ಕೆಲಸ ಮಾಡಲು ತಯಾರಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನ.

ಪೌರ ಕಾರ್ಮಿಕರ ಸೇವೆ

ಇನ್ನೂ ಇದೇ ರೀತಿಯ ಕಾಯಕದಲ್ಲಿ ತೊಡಗಿಸಿಕೊಂಡಿರುವವರು ಪೌರ ಕಾರ್ಮಿಕರು. ಪೌರ ಕಾರ್ಮಿಕರು ಒಂದು ದಿನ ರಜೆ ಮಾಡಿದರೆ ಸಮಾಜದ ಪರಿಸ್ಥಿತಿ ಹೇಗಿರುತ್ತದೆ., ಅಂತಹುದರಲ್ಲಿ ಪೌರ ಕಾರ್ಮಿಕರೇ ಇಲ್ಲವೆಂದಾದರೆ ಹೇಗಾಗಬಹುದು.,? ಊಹಿಸಲಸಾಧ್ಯ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕಸ ಗುಡಿಸುವದರಿಂದ ಹಿಡಿದು ಚರಂಡಿ-ತೋಡಿನ ಸ್ವಚ್ಛತೆ, ಕಸ ಸಾಗಾಟದವರೆಗೂ ಅವರುಗಳ ಕಾಯಕ ಮುಂದುವರೆಯುತ್ತದೆ. ಪ್ರತಿನಿತ್ಯ ಈ ಕಾಯಕ ನಡೆಯುತ್ತದೆ. ಒಮ್ಮೊಮ್ಮೆ ದಿನದ ೨೪ ಗಂಟೆ ಕೂಡ ಕೆಲಸ ಮಾಡುವ ಪರಿಸ್ಥಿತಿ ತಲೆದೋರುತ್ತದೆ.

ಅದರಲ್ಲೂ ಕಸ ಸಾಗಾಟ ಮಾಡುವವರ ಪರಿಸ್ಥಿತಿಯನ್ನೊಮ್ಮೆ ನೋಡಿದರೆ ಅಯ್ಯೋ ಎನಿಸದಿರದು. ಗಾಡಿಯಲ್ಲಿ ತುಂಬಿ ತುಳುಕುತ್ತಿರುವ ಕಸದ ನಡುವೆ ನಿಂತುಕೊAಡೇ ಕೆಲಸ ಮಾಡಬೇಕಾದ ಅನಿವಾರ್ಯತೆ. ತಡವಾಗಿ ಬಂದರೆ, ಕಸ ಹಾಕುವಾಗ ಏನಾದರೂ ಕೆಳಗೆ ಬಿದ್ದರೆ ಜನರಿಂದ ಬೈಗುಳಗಳು ಬೇರೆ., ಮಳೆಗಾಲದಲ್ಲಂತೂ ಪರಿಸ್ಥಿತಿ ಶೋಚನೀಯ. ಮಳೆ ಸುರಿಯುತ್ತಿದ್ದರೂ ಕೆಳಗಿಳಿದು ಆಶ್ರಯ ಪಡೆಯುವಂತಿಲ್ಲ., ನಿಂತುಕೊAಡೇ ಕೆಲಸ ಮಾಡಬೇಕಾದ ಅನಿವಾರ್ಯತೆ. ಅಪರೂಪಕ್ಕೆ ಯಾರಾದರೂ ಒಂದು ಲೋಟ ಕಾಫಿ, ಚಹಾ ಕೊಟ್ಟರೆ ಪುಣ್ಯ..! ಸಮಾಜದ ಸ್ವಚ್ಛತೆ., ಸಮಾಜ ಸುಧಾರಣೆಗಾಗಿ ಕಸದ ಕೊಂಪೆಯಲ್ಲಿ ಜೀವನದ ಹುಡುಕಾಟ ನಡೆಸುವ ಇಂತಹವರ ಬಗ್ಗೆ ಅನಾದರ ತೋರದೆ ಅನುಕಂಪದೊAದಿಗೆ ಪ್ರೀತಿಯ ಮಾತನಾಡಿದರೆ ಆ ಜೀವಗಳಿಗೂ ಒಂದಿಷ್ಟು ಸಂತೃಪ್ತಿ.

-ಕುಡೆಕಲ್ ಸಂತೋಷ್