ಕೂಡಿಗೆ, ಜೂ. ೧೮: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಮುಖ್ಯನಾಲೆಯ ರೂ. ೭೨ ಕೋಟಿ ವೆಚ್ಚದ ಆಧುನಿಕರಣ ಕಾಂಕ್ರೀಟ್ ಕಾಮಗಾರಿ ಮತ್ತು ಉಪ ಕಾಲುವೆಗಳ ಕಾಮಗಾರಿಯು ಭರದಿಂದ ಸಾಗುತ್ತಿದೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರ ಪ್ರಯತ್ನದಿಂದ ನೀರಾವರಿ ಇಲಾಖೆಯ ಮುಖೇನ ಹಣ ಬಿಡುಗಡೆಗೊಂಡು ಕಾವೇರಿ ನೀರಾವರಿ ನಿಗಮದ ಮೂಲಕ ಟೆಂಡರ್ ಪ್ರಕ್ರಿಯೆ ನಡೆದು ಭೂಮಿಪೂಜೆ ನೆರವೇರಿದೆ. ಈ ಹಿನ್ನೆಲೆಯಲ್ಲಿ ಇದೀಗ ಮದಲಾಪುರ ಹತ್ತಿರದಿಂದ ಮೊದಲ ಹಂತದ ತಳ ಭಾಗದ ಬೃಹತ್ ಪ್ರಮಾಣದಲ್ಲಿ ಕಾಂಕ್ರೀಟ್ ಹಾಕುವ ಕಾಮಗಾರಿ ಭರದಿಂದ ಸಾಗುತ್ತಿದ್ದು, ಮುಂದಿನ ಹಂಗಾಮಿ ಬೆಳೆಗೆ ಅಣೆಕಟ್ಟೆಯಿಂದ ಮುಖ್ಯನಾಲೆಯ ಮೂಲಕ ರೈತರ ಬೇಸಾಯಕ್ಕೆ ನೀರು ಹರಿಸುವ ಯೋಜನೆಯಡಿಯಲ್ಲಿ ಎಲ್ಲಾ ಕಾಮಗಾರಿಗಳು ಸಾಗುತ್ತಿವೆ.

ಟೆಂಡರ್‌ದಾರರು ಈಗಾಗಲೇ ೬ನೇ ತೂಬಿನಿಂದ ೧೪ ರವರೆಗೆ ಸಂಬAಧಿಸಿದ ನಾಲೆಯ ವಿವಿಧ ಹಂತದ ಕೆಲಸವನ್ನು ಕೈಗೊಳ್ಳುವುದರ ಜೊತೆಯಲ್ಲಿ ಮೊದಲ ಹಂತದ ತಳಭಾಗಕ್ಕೆ ಕಬ್ಬಿಣದ ಸಲಾಕೆಗಳ ಅಳವಡಿಕೆ ಮತ್ತು ಟೆಂಡರ್ ಪ್ರಕ್ರಿಯೆಯ ಇಲಾಖೆಯ ನಿಯಮಾನುಸಾರ ಕಾಂಕ್ರೀಟ್ ಕಾಮಗಾರಿ ಜೊತೆಯಲ್ಲಿ ಉಪ ಕಾಲುವೆಗಳ ಕಾಮಗಾರಿಯ ಮೂಲಕ ಮುಖ್ಯನಾಲೆಯಿಂದ ಸಮರ್ಪಕವಾಗಿ ನೀರು ರೈತರ ಜಮೀನಿಗೆ ತಲುಪಲು ಬೇಕಾಗುವ ಉಪ ಕಾಲುವೆ ಕಾಮಗಾರಿಯು ಕ್ರಿಯಾ ಯೋಜನೆಗೆ ಅನುಗುಣವಾಗಿ ನಡೆಯುತ್ತಿದ್ದು, ಸಂಬAಧಿಸಿದವರು ಪರಿಶೀಲಿಸಿದರು.

ಈ ಸಂದರ್ಭ ಹಾರಂಗಿ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಹೇಶ್, ಇಂಜಿನಿಯರ್, ಸಹಾಯಕ ಇಂಜಿನಿಯರ್ ಕಿರಣ್ ದೇವಯ್ಯ, ಗುತ್ತಿಗೆದಾರರ ಇಂಜಿನಿಯರ್ ರಘು ರಾಮನ್, ಸೇರಿದಂತೆ ಕಾಮಗಾರಿಯ ಗುಣಮಟ್ಟ ಪರಿಶೀಲನಾ ತಂಡದವರು ಇದ್ದರು.