ಸುಂಟಿಕೊಪ್ಪ: ಗುಂಡುಗುಟ್ಟಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಕುಶಾಲನಗರದ ನಿವೃತ್ತ ಯೋಧ ಲವ ಮತ್ತು ಅವರ ಪತ್ನಿ ನಿರೂಪಮ ಉಚಿತ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸಿದರು.
ಪುಸ್ತಕ ವಿತರಿಸಿ ಮಾತನಾಡಿದ ಲವ ಅವರು, ಮಕ್ಕಳಿಗೆ ಸರ್ಕಾರಿ ಶಾಲೆಯನ್ನು ಉಳಿಸುವ ಕುರಿತು ಹಾಗೂ ದಾಖಲಾತಿಯನ್ನು ಹೆಚ್ಚಿಸುವ ಕುರಿತು ಸರ್ಕಾರಿ ಶಾಲೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹಿತನುಡಿಗಳನ್ನು ಹೇಳಿದರಲ್ಲದೇ ೭ನೇ ತರಗತಿಯಲ್ಲಿ ಓದುತ್ತಿರುವ ಮಂಜುನಾಥ್ ಎಂಬ ವಿದ್ಯಾರ್ಥಿಯ ವಿದ್ಯಾಭ್ಯಾಸದ ಖರ್ಚನ್ನು ತಾವೇ ಭರಿಸುವುದಾಗಿ ಭರವಸೆ ನೀಡಿದರು.
ಕ್ರೀಡೆಯಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ ಸಹಾಯಹಸ್ತ ನೀಡುವುದಾಗಿ ತಿಳಿಸಿದರು. ಗುಂಡುಗುಟ್ಟಿಯ ನಿವೃತ್ತ ಯೋಧ ಎ.ಸಿ. ಪೊನ್ನಪ್ಪ ಅವರು, ಮಕ್ಕಳಿಗೆ ಸಿಗುವ ಅವಕಾಶಗಳನ್ನು ಉಪಯೋಗಿಸಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಎಲ್ಲರೂ ಗುರುತಿಸುವಂತಾಗಬೇಕು ಎಂದರು. ಮುಖ್ಯ ಶಿಕ್ಷಕಿ ಎಸ್.ಎಲ್. ಗೌರಮಣಿ ಇದ್ದರು.ಕೂಡಿಗೆ: ಗೊಂದಿಬಸವನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು.
ಕುಶಾಲನಗರ ಪುರಸಭೆ ಮಾಜಿ ಸದಸ್ಯ ಜಿ.ಬಿ. ಜಗದೀಶ್ ಅವರು ಶಾಲೆಯ ೮೫ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಸರಕಾರಿ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ದಾನಿಗಳ ಸಹಕಾರ ಅತ್ಯಗತ್ಯ. ಕ್ಷೇತ್ರದ ಶಾಸಕರು ಮೂರು ವರ್ಷಗಳಲ್ಲಿ ಅತ್ಯುತ್ತಮವಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಗೊಂದಿಬಸವನಹಳ್ಳಿ ಗ್ರಾಮದ ಅಭಿವೃದ್ಧಿಗೆಂದು ರೂ. ೫ ಕೋಟಿ ಅನುದಾನ ಕೂಡ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಪ್ರತಿವರ್ಷ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿಕೊಂಡು ಬರಲಾಗುತ್ತಿದೆ ಎಂದರು. ಮಕ್ಕಳು ಕೂಡ ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರಬೇಕಿದೆ ಎಂದರು.
ಶಾಲಾ ಮುಖ್ಯ ಶಿಕ್ಷಕಿ ಜಲಜಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಬಿ. ಜಗದೀಶ್ ಅವರ ಸದಸ್ಯತ್ವ ಅವಧಿಯಲ್ಲಿ ಗ್ರಾಮದಲ್ಲಿ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಜೊತೆಗೆ ಶಾಲೆಯ ಅಭಿವೃದ್ಧಿ ಸೇರಿದಂತೆ ವಿದ್ಯಾರ್ಥಿಗಳ ಕಲಿಕೆಗೆ ಎಲ್ಲಾ ರೀತಿಯ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ವಿಚಾರ ಎಂದರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ರೂಪಾ, ಸದಸ್ಯರಾದ ಮಣಿ, ರಾಜೇಶ್ವರಿ, ಶಕೀನ, ನೇತ್ರಾವತಿ, ಆಶಾ, ಚಂದ್ರಾವತಿ, ಈಶ್ವರಿ, ಜಯಂತಿ, ಗುತ್ತಿಗೆದಾರ ಕೃಷ್ಣಪ್ಪ, ಪೋಷಕರಾದ ಅರಸು ರಾಜು ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.