ಮಡಿಕೇರಿ, ಜೂ. ೧೮: ಬೈಕ್ ಸ್ಕಿಡ್ ಆಗಿ ರಸ್ತೆಯಲ್ಲಿ ಬಿದ್ದು ಸುಳ್ಯ ಠಾಣೆಯ ಓರ್ವ ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಹೋಂ ಗಾರ್ಡ್ ಗಂಭೀರ ಗಾಯಗೊಂಡ ಘಟನೆ ಮಡಿಕೇರಿ - ಮಾಣಿ ರಾಜ್ಯ ಹೆದ್ದಾರಿಯ ದೇವರಕೊಲ್ಲಿ ಬಳಿ ನಡೆದಿದೆ. ಅಪಘಾತದಲ್ಲಿ ಸುಳ್ಯ ಠಾಣೆಯ ಪೊಲೀಸ್ ಸಿಬ್ಬಂದಿ ವಿಖ್ಯಾತ್ (೨೮) ಎಂಬವರಿಗೆ ತಲೆ ಹಾಗೂ ಕೈಗೆ ಗಂಭೀರ ಗಾಯವಾಗಿದ್ದು, ಕೈ ತುಂಡರಿಸಲ್ಪಟ್ಟಿದೆ. ಹೋಂ ಗಾರ್ಡ್ ಸಿಬ್ಬಂದಿ ಗಿರಿಧರ್ (೪೮) ಅವರ ಕಾಲು, ಕೈಗೆ ಗಾಯಗಳಾಗಿದ್ದು ಇಬ್ಬರನ್ನೂ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಲ್ಲುಗುಂಡಿ ಪೊಲೀಸ್ ಹೊರ ಠಾಣೆಯಲ್ಲಿ ಕರ್ತವ್ಯ ಮುಗಿಸಿ ಸಂಜೆ ಸುಳ್ಯ ಕಡೆಗೆ ತೆರಳುತ್ತಿದ್ದ ಸಂದರ್ಭ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.