ನಾಪೋಕ್ಲು, ಜೂ. ೧೭: ಎಸ್‌ಎನ್‌ಡಿಪಿ ಸಂಘಟನೆ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಜನಪರ ಯೋಜನೆಗಳು ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಕಾರ್ಯದರ್ಶಿ ಪ್ರೇಮಾನಂದ ಕೆ.ವಿ. ಹೇಳಿದರು. ನಾಪೋಕ್ಲು ಎಸ್‌ಎನ್‌ಡಿಪಿ ಶಾಖೆಯ ವತಿಯಿಂದ ಮಹಿಳಾ ಸಮಾಜದಲ್ಲಿ ಆಯೋಜಿಸಿದ್ದ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಮುನ್ನಡೆ ಸಾಧಿಸಿರುವ ಹಲವು ಸಮುದಾಯಗಳಿವೆ. ಕೇರಳದಲ್ಲಿ ಆರಂಭವಾದ ಎಸ್‌ಎನ್‌ಡಿಪಿ ಸಂಘಟನೆ ಇಂದು ದೇಶಾದ್ಯಂತ ವಿಸ್ತರಿಸಿದ್ದು, ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾರ್ಥಿಗಳು ಸಂಘಟನೆಯ ಸೌಲಭ್ಯಗಳ ಸದುಪಯೋಗ ಪಡೆದು ಉತ್ತಮ ಶಿಕ್ಷಣದ ಮೂಲಕ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ಎಸ್‌ಎನ್‌ಡಿಪಿ ಸದಸ್ಯರಾಗಿರುವ ಬಗ್ಗೆ ಯಾವುದೇ ಕೀಳರಿಮೆ ಹೊಂದುವ ಅಗತ್ಯವಿಲ್ಲ. ಸ್ವಾತಂತ್ರ‍್ಯಪೂರ್ವ ಕಾಲದಿಂದಲೂ ಸಂಘಟನೆ ಸಮಾಜದ ಅಭಿವೃದ್ಧಿಗೆ ಸೇವೆ ಸಲ್ಲಿಸುತ್ತಿದ್ದು, ಕೊಡಗು ಜಿಲ್ಲೆಯಲ್ಲಿಯೂ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.
ನಾಪೋಕ್ಲು ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ. ಚಂದ್ರನ್ ಮಾತನಾಡಿ, ಸಂಘಟನೆಯ ಸದಸ್ಯರು ಶೈಕ್ಷಣಿಕವಾಗಿ ಬಲಿಷ್ಠರಾಗಿ ಸಮಾಜದಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸದಸ್ಯರ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ವಿತರಿಸಲಾಯಿತು. ಎಸ್‌ಎನ್‌ಡಿಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ. ಲವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಯೂನಿಯನ್ ಕೌನ್ಸಿಲರ್‌ಗಳಾದ ಆನಂದ್ ಮತ್ತು ಗಿರೀಶ್, ಶಾಖೆಯ ಉಪಾಧ್ಯಕ್ಷ ಎಂ.ಕೆ. ತಂಗ, ಸುರೇಶ್, ಸಮಿತಿ ಸದಸ್ಯ ಕಲ್ಲುಮೊಟ್ಟೆಯ ಸತೀಶ್ ಸೇರಿದಂತೆ ಶಾಖೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಲ್ಪ ಕೃಷ್ಣ ಪ್ರಾರ್ಥಿಸಿದರು. ಅಜಿತ್ ಕಾರ್ಯಕ್ರಮ ನಿರೂಪಿಸಿದರು. ರಾಜೀವ್ ಸ್ವಾಗತಿಸಿ ವಂದಿಸಿದರು.