ನಾಪೋಕ್ಲು, ಜೂ. ೧೭: ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವುದು ಸರ್ಕಾರದ ಜವಾಬ್ದಾರಿಯಷ್ಟೇ ಅಲ್ಲ, ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಆಗಿದೆ ಎಂದು ಮಡಿಕೇರಿಯ ವಕೀಲೆ ಅಂಬೆಕಲ್ಲು ಪ್ರಿಯ ನವೀನ್ ಹೇಳಿದರು.

ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ವತಿಯಿಂದ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದ ಅವರು, ಶಿಕ್ಷಣ ಪಡೆದ ಪ್ರತಿಯೊಂದು ಮಗುವೂ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವ ಭಾವಿ ಪ್ರಜೆಯಾಗುತ್ತದೆ. ವಿದ್ಯಾಭ್ಯಾಸದ ಜೊತೆಗೆ ಕುಟುಂಬದ ಕೆಲಸಗಳಲ್ಲಿ ನೆರವಾಗುವ ಮಕ್ಕಳನ್ನು ಬಾಲಕಾರ್ಮಿಕರೆಂದು ಪರಿಗಣಿಸಲಾಗುವುದಿಲ್ಲ. ಆದರೆ ೧೪ ರಿಂದ ೧೮ ವರ್ಷದೊಳಗಿನ ಕಿಶೋರರನ್ನು ಕೆಲಸಕ್ಕೆ ಬಳಸಿದರೆ ಕಾನೂನಿನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಅಮಾನವೀಯವಾಗಿ ದುಡಿಸಿಕೊಳ್ಳುವ ಬಾಲಕಾರ್ಮಿಕರು, ಭಿಕ್ಷಾಟನೆ ಅಥವಾ ಚಿಂದಿ ಆಯುವ ಮಕ್ಕಳನ್ನು ಕಂಡರೆ ಕಂದಾಯ, ಪೊಲೀಸ್, ಆರೋಗ್ಯ ಸೇರಿದಂತೆ ಸಂಬAಧಿತ ಇಲಾಖೆಗೆ ಮಾಹಿತಿ ನೀಡುವ ಮೂಲಕ ಬಾಲಕಾರ್ಮಿಕ ಪದ್ಧತಿಯನ್ನು ತಡೆಯಲು ಸಾರ್ವಜನಿಕರು ಮುಂದಾಗಬೇಕು ಎಂದು ಕರೆ ನೀಡಿದರು. ಇಂತಹ ಜಾಗೃತಿ ಕಾರ್ಯಕ್ರಮವನ್ನು ಮಹಿಳಾ ಒಕ್ಕೂಟವೇ ಆಯೋಜಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಯಾಗಿದ್ದ ಕಾರುಗುಂದ ಗೌಡ ಸಮಾಜದ ಅಧ್ಯಕ್ಷ ಕೊಡಪಾಲು ಗಣಪತಿ ಮಾತನಾಡಿ, ೧೪ ವರ್ಷ ದೊಳಗಿನ ಮಕ್ಕಳನ್ನು ದುಡಿಸಿಕೊಳ್ಳುವುದು ಅಪರಾಧವಾಗಿದ್ದು, ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚೇರಂಬಾಣೆ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಮಾತನಾಡಿ, ಕುಟುಂಬದ ಕೃಷಿ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಬಾಲಕಾರ್ಮಿಕ ಪದ್ಧತಿಗೆ ಸೇರುವುದಿಲ್ಲ. ಆದರೆ, ಬಡ ಹಾಗೂ ವಲಸೆ ಕಾರ್ಮಿಕರ ಮಕ್ಕಳನ್ನು ದುಡಿಸಿಕೊಂಡು ಅವರ ಶಿಕ್ಷಣ ಮತ್ತು ಹಕ್ಕುಗಳನ್ನು ಕಸಿದುಕೊಳ್ಳುವುದು ಗಂಭೀರ ಅಪರಾಧ ಎಂದು ಹೇಳಿದರು.

ವಲಸೆ ಕಾರ್ಮಿಕರ ಮಕ್ಕಳಿಗೆ ಸಂಜೆ ವೇಳೆಯಲ್ಲಿ ಅಕ್ಷರಾಭ್ಯಾಸ ಕಲಿಸುವ ಮೂಲಕ ಅವರನ್ನು ಶಿಕ್ಷಣದ ಮುಖ್ಯವಾಹಿನಿಗೆ ತರಲು ಸಮಾಜ ಮುಂದಾಗಬೇಕು ಎಂದು ಸಲಹೆ ನೀಡಿದರು. ಇದೇ ವೇಳೆ ವಿಶ್ವ ಬಾಲ್ಯ ವಿವಾಹ ವಿರೋಧಿ ದಿನದ ಅಂಗವಾಗಿ ಬಾಲ್ಯ ವಿವಾಹ ತಡೆಗೆ ಮಹಿಳೆಯರು ಜಾಗೃತರಾಗಬೇಕು ಹಾಗೂ ಇಂತಹ ಪ್ರಕರಣಗಳು ಕಂಡುಬAದರೆ ಸಂಬAಧಿತ ಇಲಾಖೆಗೆ ಮಾಹಿತಿ ನೀಡಿ ತಡೆಯಬೇಕು ಎಂದು ಕರೆ ನೀಡಿದರು.

ಕಾರುಗುಂದ ಗೌಡ ಸಮಾಜದ ಉಪಾಧ್ಯಕ್ಷ ಕೇಕಡ ದಿನೇಶ್ ಮಾತನಾಡಿದರು.

ಕಾರ್ಯದರ್ಶಿ ಕೇಕಡ ಪೂಜಾ ನಾಗೇಂದ್ರ, ಕೋಶಾಧಿಕಾರಿ ಕೊಡಪಾಲು ತೀರ್ಥ ಗಣಪತಿ, ಉಪಾಧ್ಯಕ್ಷೆ ಹೊಸೊಕ್ಲು ಲತಾ ಮೊಣ್ಣಪ್ಪ, ಕೂರನ ಸುಶೀಲಾ ಅಪ್ಪಾಜಿ ಸೇರಿದಂತೆ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.

ಕಾಳೇರಮ್ಮನ ರಶಿ ಅಶೋಕ್ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕಿ ಅಣ್ಣಚಿರ ಬೋಜಮ್ಮ ಕುಶಾಲಪ್ಪ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಬೈಮನ ಜ್ಯೋತಿ ತಿಮ್ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಕಡ್ಯದ ಸ್ಮಿತಾ ಜೀವನ್ ವಂದಿಸಿದರು.