ಮಡಿಕೇರಿ, ಜೂ. ೧೭: ಜಿಲ್ಲೆಯಲ್ಲಿ ಮಿತಿಮೀರಿರುವ ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮಗಳನ್ನು ಸರಕಾರ ಕೈಗೊಳ್ಳಬೇಕು ಎಂದು ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮೇ.ಜ. ಬಿ.ಎ. ಕಾರ್ಯಪ್ಪ, ಕಳೆದ ಹಲವು ವರ್ಷಗಳಿಂದ ಜಿಲ್ಲೆಯಲ್ಲಿ ಕಾಡಾನೆ ಸೇರಿದಂತೆ ವನ್ಯಜೀವಿ ಹಾವಳಿ ಹೆಚ್ಚಾಗಿದ್ದು, ನಷ್ಟ, ಸಾವು-ನೋವುಗಳು ಸಂಭವಿಸುತ್ತಲೇ ಇದೆ. ಆದರೆ, ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವಲ್ಲಿ ಆಡಳಿತ ವಿಫಲಗೊಂಡಿದೆ. ಅರಣ್ಯದಲ್ಲಿ ವನ್ಯಜೀವಿಗಳಿಗೆ ಅಗತ್ಯವಾದ ನೀರು, ಆಹಾರವನ್ನು ಒದಗಿಸಬೇಕಾಗಿರುವುದು ಅರಣ್ಯ ಇಲಾಖೆಯ ಕರ್ತವ್ಯವಾಗಿದೆ. ತೋಟಗಳಲ್ಲಿ ಅಗತ್ಯ ಆಹಾರ, ನೀರು ಸಿಗುತ್ತಿರುವ ಕಾರಣ ಕಾಡು ಬಿಟ್ಟು ಪ್ರಾಣಿಗಳು ನಾಡಿಗೆ ಬರುತ್ತಿವೆ. ಪರಿಣಾಮ ತೋಟಗಳು ಧ್ವಂಸವಾಗುತ್ತಿವೆ. ದಾಳಿಯಿಂದ ಸಾವು-ನೋವು ಸಂಭವಿಸುತ್ತಿದೆ ಎಂದು ಹೇಳಿದ ಅವರು, ಸರಕಾರ ಹಾಗೂ ಅರಣ್ಯ ಇಲಾಖೆ ಸುರಕ್ಷತಾ ಕ್ರಮ ಕೈಗೊಂಡು ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ವೀರಾಜಪೇಟೆ ಮಾಜಿ ಸೈನಿಕ ಸಹಕಾರ ಸಂಘದ ಅಧ್ಯಕ್ಷ ಚಪ್ಪಂಡ ಹರೀಶ್ ಮಾತನಾಡಿ, ತೋಟದಲ್ಲಿ ಬೀಡುಬಿಟ್ಟಿರುವ ಆನೆಗಳ ಸಂತತಿ ಬೆಳೆಯುತ್ತಿದ್ದು, ಅರಣ್ಯದಲ್ಲಿ ಅನಗತ್ಯ ಗಿಡ, ಮರಗಳಿದ್ದು, ಪ್ರಾಣಿಗಳಿಗೆ ಸೂಕ್ತವಾದ ಮರ, ಗಿಡಗಳನ್ನು ಬೆಳೆಸಬೇಕಾಗಿದೆ. ಅಲ್ಲದೆ ಕಾರ್ಯಾಚರಣೆಗೆ ಬರುವ ತಂಡದ ಬಳಿ ಅಗತ್ಯ ಪರಿಕರ, ಆಯುಧಗಳಿಲ್ಲ. ಅಲ್ಲದೆ ಹಿರಿಯಾಧಿಕಾರಿಗಳು ಕಾರ್ಯಾಚರಣೆ ಸಂದರ್ಭ ಸೂಕ್ತ ಮೇಲ್ವಿಚಾರಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.
ಮಾಜಿ ಸೈನಿಕರ ಬೇಡಿಕೆಗೆ ಸ್ಪಂದಿಸಿ
೫ ವರ್ಷಗಳ ಬಳಿಕ ಮಾಜಿ ಸೈನಿಕರ ಅದಾಲತ್ ನಡೆದಿದ್ದು, ಅಧಿಕಾರಿಗಳು ದೇಶಕ್ಕಾಗಿ ಹೋರಾಡಿದ ಮಾಜಿ ಸೈನಿಕರ ಬೇಕು-ಬೇಡಿಕೆಗಳಿಗೆ ಸೂಕ್ತ ಸ್ಪಂದನ ನೀಡಬೇಕೆಂದು ಕಾರ್ಯದರ್ಶಿ ಓಡಿಯಂಡ ಮೇ. ಚಿಂಗಪ್ಪ ಆಗ್ರಹಿಸಿದರು. ಜಿಲ್ಲಾಧಿಕಾರಿ ಸೋಮಶೇಖರ್ ಅವರು ನಮ್ಮ ಮನವಿಗೆ ಸ್ಪಂದಿಸಿ ಅದಾಲತ್ ನಡೆಸಿದ್ದಾರೆ. ತಹಶೀಲ್ದಾರ್‌ಗಳಿಗೆ ೨ ತಿಂಗಳಿಗೊಮ್ಮೆ ಅದಲಾತ್ ನಡೆಸಲು ಸೂಚಿಸಿದರು. ಇದುವರೆಗೂ ಸಭೆ ನಡೆಸಿಲ್ಲ. ಮಾಜಿ ಸೈನಿಕರು ಅನೇಕ ಸಮಸ್ಯೆ ಎದುರಿಸುತ್ತಿದ್ದು, ನಿವೇಶನದಂತಹ ಪ್ರಯೋಜನಗಳು ದೊರೆಯುತ್ತಿಲ್ಲ. ೧೫೦೦ಕ್ಕೂ ಹೆಚ್ಚು ನಿವೇಶನ ಮಂಜೂರಾತಿ ಅರ್ಜಿ ಬಾಕಿ ಇದೆ. ಕೇಳಿದರೆ ಜಾಗವಿಲ್ಲ ಎಂಬ ಉತ್ತರ ಬರುತ್ತಿದೆ. ಈ ಬಗ್ಗೆ ಕ್ರಮವಹಿಸಬೇಕೆಂದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ಲೆ.ಕ. ಅಯ್ಯುಂಡ ಗಣಪತಿ, ಕಿಗ್ಗಟ್‌ನಾಡ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ. ಮಂದಣ್ಣ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಬಟ್ಟಿಯನ ಈರಪ್ಪ ಹಾಜರಿದ್ದರು.