ಮಡಿಕೇರಿ, ಜೂ. ೧೭: ಕೃಷಿ ಪ್ರಧಾನವಾದ ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆಯಂತೆ ಮುಂಗಾರು ಮಳೆ ಇನ್ನೂ ಆರಂಭಗೊAಡಿಲ್ಲ. ಪ್ರಸಕ್ತ ಸನ್ನಿವೇಶದಲ್ಲಿ ರಾಷ್ಟಾçದ್ಯಂತ ಶೇ ೬೪ ರಷ್ಟು ಮಳೆ ಕೊರತೆ ಎದುರಾಗಲಿದೆ ಎಂಬ ಮಾಹಿತಿ ಮಳೆಯನ್ನು ಅವಲಂಬಿಸಿರುವ ಕೊಡಗಿಗೂ ಆತಂಕಕಾರಿ ಎನಿಸುತ್ತಿದೆ. ಕಳೆದ ವರ್ಷ ಮೇ ತಿಂಗಳ ಅಂತ್ಯದಿAದಲೇ ಜಿಲ್ಲೆಯಲ್ಲಿ ಮುಂಗಾರು ಮಳೆ ತನ್ನ ಆರ್ಭಟ ತೋರಿತ್ತು. ಜೂನ್ ೧೫ರ ವೇಳೆಗೆ ಶಾಲಾ ಕಾಲೇಜಿಗೆ ಹಲವು ದಿನ ರಜೆ ಘೋಷಿಸಲ್ಪಟ್ಟಿತ್ತಲ್ಲದೆ ಜಿಲ್ಲೆಯಲ್ಲಿ ಎರಡು ಬಾರಿ ಪ್ರವಾಹ ಪರಿಸ್ಥಿತಿಯೂ ಈ ಅವಧಿಯಲ್ಲಿ ಎದುರಾಗಿದ್ದು, ಇನ್ನೂ ಜನಮಾನಸದಲ್ಲಿದೆ. ಆದರೆ, ಪ್ರಸಕ್ತ ವರ್ಷದ ಸನ್ನಿವೇಶ ಬೇರೆಯೇ ಆಗಿರುವುದು ಈಗಿನ ವಾಸ್ತವವಾಗಿದೆ.
ಜಿಲ್ಲೆಯಾದ್ಯಂತ ಆಗಾಗ್ಗೆ ಮೋಡ ಆವರಿಸುತ್ತಿದೆಯಾದರೂ ಮಳೆ ಮಾತ್ರ ಸುರಿಯುತ್ತಿಲ್ಲ.. ಕೇವಲ ಆಗೊಮ್ಮೆ...ಹೀಗೊಮ್ಮೆ ತುಂತುರು ಮಳೆ ಬಿಟ್ಟರೆ ಎಲ್ಲೆಡೆ ಬಿಸಿಲಿನ ವಾತಾವರಣವೇ ಮುಂದುವರೆಯುತ್ತಿದೆ. ವಾಡಿಕೆಯಂತೆ ಈಗಾಗಲೇ ಜಿಲ್ಲೆಯಲ್ಲಿ ನೈಜ ಮುಂಗಾರು ಆರಂಭವಾಗಿ ನದಿ, ತೊರೆ, ತೋಡುಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿರುತಿತ್ತು. ಆದರೆ, ಪ್ರಸ್ತುತ ಕೆಲವೆಡೆ ಕೆರೆ-ಬಾವಿಗಳಲ್ಲಿ ನೀರಿನಮಟ್ಟ ಕಡಿಮೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ತನಕ ಸರಾಸರಿ ೨೫ ಇಂಚುಗಳಷ್ಟು ಮಳೆ ಕಡಿಮೆಯಾಗಿದೆ. ಕಳೆದ ಬಾರಿ ಜನವರಿಯಿಂದ ಈ ತನಕ ಜಿಲ್ಲೆಯಲ್ಲಿ ೩೫ ಇಂಚುಗಳಷ್ಟು ಮಳೆಯಾಗಿತ್ತು. ಆದರೆ, ಈ ವರ್ಷ ಕೇವಲ ೧೦ ಇಂಚಿನಷ್ಟು ಮಾತ್ರ ಮಳೆಯಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಲ್ಲಿಯೂ ಸರಾಸರಿ ಮಳೆ ಕಳೆದ ವರ್ಷಕ್ಕಿಂತ ತೀರಾ ಇಳಿಮುಖವಾಗಿದೆ. ಈ ಪರಿಸ್ಥಿತಿಯಿಂದ ಭತ್ತದ ಕೃಷಿಯ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ. ಕೆಲವು ಉತ್ಸಾಹಿ ರೈತರು ಈ ವೇಳೆಗೆ ಸಸಿಮಡಿಯ ತಯಾರಿ ನಡೆಸುತ್ತಿದ್ದರು. ಆದರೆ, ಈ ಬಾರಿ ಮಳೆ ಇಲ್ಲದೆ ಗದ್ದೆಗಳು ನೀರು ಕಾಣದೆ ಕೃಷಿಗೆ ಸಮಸ್ಯೆ ಎದುರಾಗಿದೆ. ಪ್ರಸ್ತುತ ಹವಾಮಾನ ಇಲಾಖೆಯ ಮೂಲಕ ಬರುತ್ತಿರುವ ವರದಿಗಳೂ ಜನತೆಯಲ್ಲಿ ಆತಂಕ ಸೃಷ್ಟಿಸುತ್ತಿದೆ. ಕೊಡಗು ಗುಡ್ಡಗಾಡು ಪ್ರದೇಶವಾದರೂ ಈ ಜಿಲ್ಲೆಯಲ್ಲಿ ಮುಂಗಾರು ಮಳೆ ಸಮರ್ಪಕವಾಗಿ ಬೀಳದಿದ್ದರೆ ಕೊಡಗು ಮಾತ್ರವಲ್ಲ ರಾಜ್ಯಕ್ಕೂ ಸಮಸ್ಯೆ ಉಂಟಾಗುವುದು ಸಹಜ. ಈ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದ ಮುಂಗಾರಿನ ಪರಿಸ್ಥಿತಿ ಈಗಿನ ಸನ್ನಿವೇಶದಲ್ಲಿ ದಿಗಿಲು ಮೂಡಿಸುತ್ತಿದೆ.
ಜಿಲ್ಲೆಯ ಈ ತನಕದ ಅಂಕಿಅAಶ
ಪ್ರಸಕ್ತ ವರ್ಷ ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ ೧೦ ಇಂಚುಗಳಷ್ಟು ಮಳೆಯಾಗಿದೆ. ಕಳೆದ ವರ್ಷ ಈ ಪ್ರಮಾಣ ೩೫ ಇಂಚಿನಷ್ಟಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ ೫೩ ಇಂಚಿನಷ್ಟು ಮಳೆಯಾಗಿದ್ದರೆ ಈ ಬಾರಿ ಕೇವಲ ೧೬ ಇಂಚುಗಳಷ್ಟಾಗಿದೆ. ವೀರಾಜಪೇಟೆ ತಾಲೂಕಿನಲ್ಲಿ ಕಳೆದ ಸಾಲಿನಲ್ಲಿ ೩೬.೨೦ ಇಂಚು ಮಳೆಯಾಗಿದ್ದರೆ ಈ ಬಾರಿ ೧೨.೬೦ ಇಂಚು, ಪೊನ್ನಂಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೩೨ ಇಂಚು ಹಾಗೂ ಈ ಬಾರಿ ೮ ಇಂಚಿನಷ್ಟು ಮಾತ್ರ ಸರಾಸರಿ ಮಳೆಯಾಗಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ಬಾರಿ ೩೧ ಇಂಚು ಮಳೆಯಾಗಿದ್ದು, ಈ ಬಾರಿ ೯ ಇಂಚು ಹಾಗೂ ಕುಶಾಲನಗರ ತಾಲೂಕಿನಲ್ಲಿ ಕಳೆದ ಬಾರಿ ೨೪ ಇಂಚು ಹಾಗೂ ಈ ಬಾರಿ ೬ ಇಂಚಿನಷ್ಟು ಮಾತ್ರ ಸರಾಸರಿ ಮಳೆಯಾಗಿದೆ. - ಕಾಯಪಂಡ ಶಶಿ ಸೋಮಯ್ಯ